ಸಾರಾಂಶ
ರಾಜ್ಯಪಾಲರು ದೇವಸ್ಥಾನದ ಗಣ್ಯರ ಸಂದರ್ಶಕರ ಪಟ್ಟಿಯಲ್ಲಿ ಸರ್ವೇ ಜನ ಸುಖಿನೋ ಭವ ಎಂದು ಬರೆದಿದ್ದು, ಮುರ್ಡೇಶ್ವರದ ಸೌಂದರ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಗೋಕರ್ಣ/ ಮುರ್ಡೇಶ್ವರ:
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗುರುವಾರ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರ ಹಾಗೂ ಮುರ್ಡೇಶ್ವರಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ರಾಜ್ಯಪಾಲರು ಪೂಜೆ ಸಲ್ಲಿಸಿದರು. ಈ ವೇಳೆ ಮಂದಿರದ ಅರ್ಚಕರಾದ ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಮಂದಿರದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವೇ. ಮಹಾಬಲ ಉಪಾಧ್ಯ ಹಾಗೂ ಉಪಾಧಿವಂತರು ಸಹಕರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಸತೀಶ ಗೌಡ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗ, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.ಮುರ್ಡೇಶ್ವರಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ರಾಜ್ಯಪಾಲರು ಈಶ್ವರನ ದರ್ಶನ ಪಡೆದರು. ದೇವಸ್ಥಾನದಲ್ಲಿ ಅವರಿಗೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿ ಮುರ್ಡೇಶ್ವರ ದೇವರ ಫೋಟೋ ನೀಡಿ ಗೌರವಿಸಿದರು. ರಾಜ್ಯಪಾಲರು ದೇವಸ್ಥಾನದ ಗಣ್ಯರ ಸಂದರ್ಶಕರ ಪಟ್ಟಿಯಲ್ಲಿ ಸರ್ವೇ ಜನ ಸುಖಿನೋ ಭವ ಎಂದು ಬರೆದಿದ್ದು, ಮುರ್ಡೇಶ್ವರದ ಸೌಂದರ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.14ಬಿಕೆಲ್3