ಸಾರಾಂಶ
ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಪಾಲಿಕೆಗಳವರೆಗೆ ವಿಭಜನೆ ಮಾಡಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ವಾಪಸು ಕಳುಹಿಸಿದ್ದಾರೆ.
ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಪಾಲಿಕೆಗಳವರೆಗೆ ವಿಭಜನೆ ಮಾಡಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ಹೆಚ್ಚಿನ ವಿವರಣೆ ಕೋರಿ ರಾಜ್ಯ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ರಚಿಸಿ ಅದರಡಿ ಬಿಬಿಎಂಪಿ ವಿಭಜನೆ ಮಾಡಿ ವಿವಿಧ ಪಾಲಿಕೆಗಳನ್ನು ರಚಿಸಲು ಪ್ರಸ್ತಾಪಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ವಿಧೇಯಕವನ್ನು ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆಗೆ ಸರ್ಕಾರ ಕಳುಹಿಸಿತ್ತು. ಆದರೆ ಅಂಕಿತ ಹಾಕಲು ನಿರಾಕರಿಸಿ ಹೆಚ್ಚುವರಿ ವಿವರಣೆಗಳನ್ನು ಕೇಳಿ ಮರು ಸಲ್ಲಿಕೆ ಮಾಡಲು ವಾಪಸ್ ಕಳುಹಿಸಿದ್ದಾರೆ. ತನ್ಮೂಲಕ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ದೆಹಲಿಯಲ್ಲಿ ವಿಫಲ: ಈ ಬಗ್ಗೆ ವಿಧೇಯಕದೊಂದಿಗೆ ಟಿಪ್ಪಣಿ ಕಳುಹಿಸಿರುವ ರಾಜ್ಯಪಾಲರು, ಬಿಲ್ ವಿರೋಧಿಸಿ ಬೆಂಗಳೂರು ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿರೋಧ ಪಕ್ಷದ ಸದಸ್ಯರು ನನ್ನನ್ನು ಭೇಟಿ ಮಾಡಿ ವಿವರವಾದ ಮನವಿ ಪತ್ರ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಏಳು ಪಾಲಿಕೆಗಳಾಗಿ ಪ್ರತ್ಯೇಕಗೊಳಿಸಿರುವ ಪ್ರಯೋಗ ವಿಫಲವಾಗಿದೆ. ಜತೆಗೆ ಇದು ಸಂವಿಧಾನದ 74ನೇ ತಿದ್ದುಪಡಿಗೆ ವಿರೋಧವಿದ್ದು, ಆಡಳಿತ ವಿಕೇಂದ್ರೀಕರಣದ ಬದಲು ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಿದಂತಾಗಲಿದೆ.
ಜತೆಗೆ ಟನರ್ ರಸ್ತೆ, ಸ್ಕೈ ಡೆಕ್, ಎಕ್ಸ್‌ಪ್ರೆಸ್ ಕಾರಿಡಾರ್‌ನಂಥ ಯೋಜನೆಗಳಿಗೆ ಅವರ ವಿರೋಧವಿದೆ. ಹೀಗಾಗಿ ಇದನ್ನು ಪುನರ್ ಪರಿಶೀಲಿಸಿ ವಿವರಣೆ ನೀಡಿ ಎಂದು ವಾಪಸು ಕಳುಹಿಸಿದ್ದಾರೆ.
ವಿಧೇಯಕದ ಬಗ್ಗೆ ಸರ್ಕಾರದ ನಿಲುವೇನು?
ಬೆಂಗಳೂರಿನ ಜನಸಂಖ್ಯೆ ಸುಮಾರು 1.5 ಕೋಟಿ ತಲುಪಿದೆ. 786 ಚ.ಕಿಮೀ ವಿಸ್ತೀರ್ಣದ ಬೆಂಗಳೂರು ನಗರ ವಿಸ್ತರಣೆಯಾಗುತ್ತಿದೆ. ಒಬ್ಬ ಮೇಯರ್ ಮತ್ತು ಆಯುಕ್ತರಿಂದ ಇದನ್ನು ನಿರ್ವಹಣೆ ಮಾಡಲಾಗದು. ಆಡಳಿತ ಹತೋಟಿಗೆ ಸಿಗುತ್ತಿಲ್ಲ. ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಪಾರದರ್ಶಕತೆ ಮತ್ತು ಸಮರ್ಥ ಆಡಳಿತದ ದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಹೀಗಾಗಿ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಗತ್ಯವಿದೆ ಎಂದು ವಿಧೇಯಕದಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವು ತಿಳಿಸಿತ್ತು.