ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಮತ್ತೆ ಮುಂದೂಡಿಕೆ : ಮಾ. 29ಕ್ಕೆ ಮಂಡನೆ

| N/A | Published : Mar 27 2025, 01:03 AM IST / Updated: Mar 27 2025, 07:26 AM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಮತ್ತೆ ಮುಂದೂಡಿಕೆ : ಮಾ. 29ಕ್ಕೆ ಮಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯವ್ಯಯ ಮಂಡನೆ ಕೊನೆಯ ಕ್ಷಣದಲ್ಲಿ ಬದಲಾಗಿದ್ದು, ಮಾ.29ಕ್ಕೆ ಮಂಡಿಸುವುದಕ್ಕೆ ಅಂತಿಮವಾಗಿ ತೀರ್ಮಾನಿಸಲಾಗಿದೆ.

 ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯವ್ಯಯ ಮಂಡನೆ ಕೊನೆಯ ಕ್ಷಣದಲ್ಲಿ ಬದಲಾಗಿದ್ದು, ಮಾ.29ಕ್ಕೆ ಮಂಡಿಸುವುದಕ್ಕೆ ಅಂತಿಮವಾಗಿ ತೀರ್ಮಾನಿಸಲಾಗಿದೆ.

ಆರಂಭದಲ್ಲಿ ಮಾ.27ರ ಗುರುವಾರ ಬಜೆಟ್‌ ಮಂಡನೆಗೆ ದಿನಾಂಕ ನಿಗದಿಯಾಗಿತ್ತು. ಬೆಂಗಳೂರು ನಗರದ ಶಾಸಕರ ಸಭೆಯ ಬಳಿಕ ಮಾ.28ಕ್ಕೆ ಮಂಡಿಸುವುದಕ್ಕೆ ನಿರ್ಧರಿಸಲಾಗಿತ್ತು. ಅದರಂತೆ ಎಲ್ಲಾ ಸಿದ್ಧತೆ ಮಾಡಿಕೊಂಡು ಅಧಿಕೃತವಾಗಿ ಪ್ರಕಟಣೆ ಸಹ ನೀಡಿತ್ತು. ಆದರೆ, ಬುಧವಾರ ರಾತ್ರಿ ಏಕಾಏಕಿ ಬಜೆಟ್‌ ಮಂದೂಡುವುದಕ್ಕೆ ತೀರ್ಮಾನಿಸಿ ಮಾ.29ರ ಶನಿವಾರ ಬೆಳಗ್ಗೆ 11 ಗಂಟೆಗೆ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.

ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್‌ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್ ಮಂಡಿಸಲಿದ್ದಾರೆ. ಆನ್‌ಲೈನ್‌ ಮೂಲಕ ಆಯವ್ಯಯ ಮಂಡನೆಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರ್ಯಾಂಡ್‌ ಬೆಂಗಳೂರು ಮುಂದುವರಿಕೆ:

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಂತೆಯೇ ಕಳೆದ ವರ್ಷ ಬಿಬಿಎಂಪಿ ಬಜೆಟ್‌ ರೂಪಿಸಿ ಮಂಡಿಸಿತ್ತು. ಈ ಬಾರಿಯೂ ಬ್ರ್ಯಾಂಡ್‌ ಬೆಂಗಳೂರಿನ ಪರಿಕಲ್ಪನೆಗಳಾದ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್‌ ಸಿದ್ಧಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿ ಆಧಾರಿತ ಬಜೆಟ್‌:

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಿಗೆ ಸಂಬಂಧಿಸಿದಂತೆ ಸುರಂಗ ರಸ್ತೆ, ಸ್ಕೈಡಕ್‌ನಂತಹ ದೊಡ್ಡ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ನೀಡಿರಲಿಲ್ಲ. ಈ ಬಾರಿ ಸರ್ಕಾರದ ಬಜೆಟ್‌ನಲ್ಲಿ 7 ಸಾವಿರ ಕೋಟಿ ರು. ಅನುದಾನದ ಭರವಸೆ ನೀಡಿರುವುದರಿಂದ ಬಿಬಿಎಂಪಿಯು ನಗರದ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ಹೆಚ್ಚಿನ ಒಲವು ನೀಡಲಿದೆ. ಅದಕ್ಕಾನುಗುಣವಾಗಿ ಬಜೆಟ್‌ ಮಂಡಿಸಿ ಯೋಜನೆಗಳಿಗೆ ಅನುದಾನ ಮೀಸಲಿಡಲಾಗುತ್ತಿದೆ.

ಬಿಜೆಪಿ ಶಾಸಕರಿಂದ ಅನುದಾನದ ಬೇಡಿಕೆ

ತಮ್ಮ ಕ್ಷೇತ್ರಗಳಿಗೆ ಪಾಲಿಕೆ ಬಜೆಟ್‌ನಲ್ಲಿ ಹೆಚ್ಚಿನ ಮೊತ್ತದ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಬಿಜೆಪಿ ಶಾಸಕರು ಕೋರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ತಿಳಿಸಿದ್ದಾರೆ. ಆದರೆ, ಬಿಬಿಎಂಪಿಯ ಬಜೆಟ್‌ ಸಂಬಂಧಿಸಿದಂತೆ ನಗರದ ಶಾಸಕರ ಸಭೆಗೆ ಹಾಜರಾಗದೇ ಬಿಜೆಪಿ ಶಾಸಕರು ಸಾಮೂಹಿಕವಾಗಿ ಬಹಿಷ್ಕರಿಸಿದ್ದರು. 

ಅಮಾವಾಸ್ಯೆಯ ಮೊದಲ ಬಜೆಟ್‌

ಬಿಬಿಎಂಪಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮಾವಾಸ್ಯೆ ದಿನ ಬಿಬಿಎಂಪಿಯ ಆಯವ್ಯಯ ಮಂಡನೆ ಮಾಡಲಾಗುತ್ತಿದೆ. ಈ ಹಿಂದೆ 2022-23ನೇ ಸಾಲಿನಲ್ಲಿ ಬಿಬಿಎಂಪಿಯ ಅಧಿಕಾರಿಗಳು ತಡ ರಾತ್ರಿ 12 ಗಂಟೆಗೆ ಬಿಬಿಎಂಪಿಯ ಬಜೆಟ್‌ ಮಂಡಿಸಿದೇ ವೆಬ್‌ ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಬಜೆಟ್‌ ಮಂಡನೆ ಮಾಡಿದ್ದರು. ಇದೀಗ, ಅಮಾವಾಸ್ಯೆಯ ದಿನ ಮಂಡಿಸಲಾಗುತ್ತಿದೆ.