ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಸಭೆಯ ೨೦೨೫-೨೬ನೇ ಸಾಲಿನ ಬಜೆಟ್ ಸಭೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್ ₹೧.೮೪ ಕೋಟಿ ಉಳಿತಾಯ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಂಡರು.ನಗರಸಭಾ ಸಭಾಂಗಣದಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ೨೦೨೪-೨೫ನೇ ಸಾಲಿನ ಪರಿಷ್ಕೃತ ಹಾಗೂ ೨೦೨೫-೨೬ನೇ ಸಾಲಿನ ಸ್ವಂತ ಸಂಪನ್ಮೂಲಗಳಿಂದ ನಿರೀಕ್ಷಿತ ಆದಾಯ ೧೫೧೫.೬೦ ಲಕ್ಷ ಹಾಗೂ ಸರ್ಕಾರಗಳಿಂದ ನಿರೀಕ್ಷಿತ ಅನುದಾನಗಳು ೪೩೮೮.೯೫ ಲಕ್ಷ ಸೇರಿ ಒಟ್ಟು ₹೫೯೪೨.೪೦ ಲಕ್ಷ ಆದಾಯ ನಿರೀಕ್ಷಿಸಿದ್ದು, ಹಿಂದಿನ ಸಾಲಿನ ನಿರ್ವಹಣಾ ವೆಚ್ಚ ಮತ್ತು ಬಂಡವಾಳ ಕಾಮಗಾರಿಗೆ ಒಟ್ಟಾರೆ ೫೭೫೮.೩೮ ಲಕ್ಷ ರು. ಅಂದಾಜು ವೆಚ್ಚದಲ್ಲಿ ೧೮೪.೦೨ ಲಕ್ಷ ಉಳಿತಾಯದ ಆಯವ್ಯಯ ಇದಾಗಿದೆ ಎಂದು ತಿಳಿಸಿದರು.ವಿವಿಧ ಮೂಲಗಳಿಂದ ಆಸ್ತಿ ತೆರಿಗೆಯಿಂದ ೬೦೦ ಲಕ್ಷ, ಆಸ್ತಿ ತೆರಿಗೆ ದಂಡದಿಂದ ೨೫೦ ಲಕ್ಷ, ಉಪಕರ ಸಂಗ್ರಹಣೆಯಿಂದ ೨೫ ಲಕ್ಷ, ಉಪಕರ ಸಂಗ್ರಹ ೧೯೯ ಲಕ್ಷ, ಘನವ್ಯಾಜ್ಯವಸ್ತು ನಿರ್ವಹಣಾ ಕರ ೭೫ ಲಕ್ಷ, ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕಗಳಿಂದ ೮೫ ಲಕ್ಷ, ಶುದ್ದ ಕುಡಿಯುವ ನೀರಿನ ಘಟಕಗಳ ಶುಲ್ಕ ೧೮ ಲಕ್ಷ, ಅಂಗಡಿ ಮಳಿಗೆಗಳ ಬಾಡಿಗೆ ಮತ್ತು ತರಕಾರಿ ಮಾರುಕಟ್ಟೆಗಳ ಶುಲ್ಕ ೩೮ ಲಕ್ಷ ,ಅಭಿವೃದ್ದಿ ಶುಲ್ಕ ಮತ್ತು ಕಟ್ಟಡ ಪರವಾನಗಿ ೫೫ ಲಕ್ಷ, ರಸ್ತೆ ಅಗೆತ ಶುಲ್ಕ ೧ ಲಕ್ಷ, ಸಾರ್ವಜನಿಕ ಶೌಚಾಲಯಗಳ ಬಾಡಿಗೆ ೧೦ ಲಕ್ಷ, ಒಳಚರಂಡಿ ಸಂಪರ್ಕ ಶುಲ್ಕ ೪೦ ಲಕ್ಷ, ಸೇರಿದಂತೆ ವಿವಿಧ ಬಾಬ್ತುಗಳಿಂದ ಒಟ್ಟಾರೆ ೧.೫೧೫.೬೦ ಲಕ್ಷ ರು. ನಗರಸಭೆಯ ಸ್ವಂತ ಮೂಲಗಳಿಂದ ಆದಾಯ ಕ್ರೊಢೀಕರಿಸಲಾಗುವುದು ಎಂದರು.
ಎಸ್.ಎಫ್.ಸಿ. ಯೋಜನೆ, ಎಸ್.ಎಫ್.ಸಿ. ಮತ್ತು ಸಿಎಂಸಿ, ಎಂಟಿಡಿಸಿ ಅನುದಾನ ಸೇರಿದಂತೆ ಒಟ್ಟು ರು. ೫೯೪೨.೪೦ಲಕ್ಷ ಗಳ ಅನುದಾನ ನಿರೀಕ್ಷಿಸಲಾಗಿದೆ ಎಂದರು. ನಗರಸಭೆ ಮತ್ತು ಸರ್ಕಾರಿ ಅನುದಾನದಡಿಯಲ್ಲಿ ವಿದ್ಯುತ್ ಚಿತಾಗಾರ, ಜಾಹಿರಾತು ಪ್ರಕಟಣೆಗೆ ಲೆಡ್ ಡಿಸ್‌ಪ್ಲೇ, ಮಾರುಕಟ್ಟೆ ಉನ್ನತೀಕರಣ, ಸುರಕ್ಷತಾ ಆಹಾರ ವಲಯಗಳ ಸ್ಥಾಪನೆ, ಕಾರ್ಯನಿರತ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನ, ಅಮೃತ್ ೨.೦ಯೋಜನೆಯಡಿ ಮನೆಮನೆಗೂ ಗಂಗೆ, ಉದ್ಯಾನವನ ಅಭಿವೃದ್ದಿ ಮತ್ತು ನಗರ ಹಸರೀಕರಣ, ಕೆರೆ ಕಟ್ಟೆಗಳ ಅಭಿವೃದ್ದಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮ, ವಿಕಲಚೇತನರ ಕಲ್ಯಾಣ ಕಾರ್ಯಕ್ರಮ, ಸ್ವಚ್ಛ ಭಾರತ್ ಮಿಷನ್ ಯೋಜನೆ ೨.೦ ಘನತ್ಯಾಜ್ಯ ನಿರ್ವಹಣೆಗಾಗಿ ೧೫ನೇ ಹಣಕಾಸು ಯೋಜನೆಯಡಿ ವಾಹನಗಳ ಖರೀದಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ೫೭೫೮.೨೮ ಲಕ್ಷಗಳಲ್ಲಿ ಕೈಗೊಳ್ಳಲಾಗುವುದು ಎಂದರು.ನಗರಸಭೆ, ಅಧಿಕಾರಿಗಳ ಧೋರಣೆ ಬಗ್ಗೆ ಆಕ್ರೋಶ:ನಗರಸಭೆ ವ್ಯಾಪ್ತಿಯ ೩೧ ವಾರ್ಡುಗಳಲ್ಲೂ ಸ್ವಚ್ಛತೆ ಇಲ್ಲ, ಕಸವಿಲೇವಾರಿ ಆಗುತ್ತಿಲ್ಲ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಚರಂಡಿಗಳೆಲ್ಲಾ ಹೂಳು ತುಂಬಿ ನಾರುತ್ತಿವೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮ ಮಾತಿಗೆ ನಗರಸಭೆಯಲ್ಲಿ ಬೆಲೆ ಇಲ್ಲ ಎಂದು ಆರೋಪಿಸಿ, ಸದಸ್ಯರು ನಗರಸಭೆ ಆಡಳಿತದ ವಿರುದ್ಧ ಮುಗಿ ಬಿದ್ದರು.ನಗರಸಭಾ ಅಧ್ಯಕ್ಷ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಸಭೆ ಪ್ರಾರಂಭವಾಗುತ್ತಿದ್ದಂತೆ ಎಸ್‌ಡಿಪಿಐನ ಮಹೇಶ್, ಖಲೀಲ್, ಅಮಿಕ್, ತೌಜಿಯಾಭಾನು ಸೇರಿದಂತೆ, ಒಕ್ಕೊಲರಿನಿಂದ ಎಲ್ಲಾ ಸದಸ್ಯರು ನಗರಸಭೆ ಅಧಿಕಾರಿಗಳು ಹಾಗೂ ನೌಕರರ ವಿರುದ್ದ ಮುಗಿಬಿದ್ದರು, ನಮ್ಮ ಯಾವ ಮನವಿ ಹಾಗೂ ದೂರಿಗೂ ಬೆಲೆ ಇಲ್ಲ, ಇಲ್ಲಿನ ಆರೋಗ್ಯಾಧಿಕಾರಿಗಳು ಕೆಲ ವಾರ್ಡುಗಳಿಗೆ ಮಾತ್ರ ಸೀಮಿತವಾಗಿದ್ದಾರೆ, ಕೆಲ ವಾರ್ಡುಗಳಲ್ಲಿ ೨ ರಿಂದ ೩ ತಿಂಗಳಾದರೂ ಕಸ ವಿಲೇವಾರಿಯಾಗಿಲ್ಲಿ ಚರಂಡಿಗಳು ಸ್ವಚ್ಚವಾಗಿಲ್ಲ, ಕುಡಿಯುವ ನೀರಂತೂ ೨೦ ದಿನವಾದರೂ ಬರುವುದಿಲ್ಲ ಎಂದು ದೂರಿದರು.ಇದಕ್ಕೆ ಸಂಬಂಧಪಟ್ಟವರನ್ನು ಕೇಳಿದರೆ, ಕಾರ್ಮಿಕರಿಲ್ಲ, ಕಸವಿಲೇವಾರಿ ವಾಹನಗಳಿಲ್ಲ, ಪಂಪ್‌ಹೌಸ್‌ನಲ್ಲಿ ರಿಪೇರಿ ಎಂಬ ಉದಾಸೀನ ಉತ್ತರ ಕೊಡುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಈಗಲೇ ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಸಷ್ಟನೆ ನೀಡಿ ಆನಂತರ ಬಜೆಟ್ ಮಂಡಿಸಿ ಎಂದು ಸದಸ್ಯರು ಆಗ್ರಹಿಸಿದರು.ನಗರಸಭೆಯ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿರುವ ಕಾರಣದಿಂದ ಇಲ್ಲಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಇನ್ನು ಐದಾರು ತಿಂಗಳಾದರೂ ನಮ್ಮ ಮರ್ಯಾದೆ ಉಳಿಯಬೇಕು, ಅದಕ್ಕಾಗಿ ಅಧಿಕಾರಿಗಳನ್ನು ಹತೋಟಿಗೆ ತೆಗೆದುಕೊಂಡು ಕೆಲಸ ತೆಗೆದುಕೊಳ್ಳಿ ಇಲ್ಲದಿದ್ದರೆ ರಾಜೀನಾಮೆ ಕೊಡಿ ಎಂದು ಅಬ್ರಹಾರ್ ಅಹಮದ್ ಆಗ್ರಹಿಸಿದರು. ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ, ಚಲನವಲನ ಪುಸ್ತಕಗಳನ್ನು ಇಡಲಾಗುವುದು ಎಂದು ಅಧ್ಯಕರು ತಿಳಿಸಿದರು.
ಆದಾಯದ ಮೂಲ ಹೆಚ್ಚಬೇಕಾದರೆ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸಲೀಸಾಗಿ ಆಗಬೇಕು, ನಗರಸಭೆ ಸೇರಿದ ಆಸ್ತಿಪಾಸ್ತಿಗಳು ಮತ್ತು ಸರ್ಕಾರಿ ಗೃಹಗಳಿಂದ ಕರ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಅಬ್ರಹಾರ್ ಅಹಮದ್ ಸೇರಿಂದಂತೆ ಸದಸ್ಯರು ಒತ್ತಾಯಿಸಿದರು.ಗಾಳಿಪುರ ಬಡಾವಣೆಯಲ್ಲಿ ೩೦ ಗುಂಟೆ ನಗರಸಭಾ ಆಸ್ತಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಖಾತೆಗೆ ಮುಂದಾಗಿದ್ದಾರೆ, ಈ ಬಗ್ಗೆ ನಗರಸಭೆಗೆ ದೂರು ಕೊಟ್ಟರೆ ಪ್ರಯೋಜನವಾಗಿಲ್ಲ, ನಗರಸಭೆ ಆಸ್ತಿಗೆ ನಾನು ವಕಾಲತ್ತು ವಹಿಸಿ ಹೋರಾಡಬೇಕಾಗಿದೆ, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಾವು ಲೋಕಾಯುಕ್ತಕ್ಕೆ ಹೋಗಬೇಕಾಗುತ್ತದೆ ಎಂದು ಸದಸ್ಯ ಖಲೀಲ್ ಎಚ್ಚರಿಸಿದರು. ಪೌರಾಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ರಾಮದಾಸ್ ಸದಸ್ಯರು ಹಾಗೂ ನಗರಸಭಾ ಸಿಬ್ಬಂದಿ ಭಾಗವಹಿಸಿದ್ದರು.