ಬಂಗ್ರ ಯುವರಾಣಿ ಕನಕವತಿಯ ಸಂದರ್ಶನರುಕ್ಮಿಣಿ ವಸಂತ್ ‘ಕಾಂತಾರ ಚಾಪ್ಟರ್‌ 1’ನ ಯುವರಾಣಿ ಕನಕವತಿ ಪಾತ್ರದಿಂದ ಜಗತ್ತಿನ ಗಮನಸೆಳೆದಿದ್ದಾರೆ. ವಿಭಿನ್ನ ಶೇಡ್‌ನ ಈ ಪಾತ್ರ ನಿಭಾಯಿಸುವಾಗಿನ ಸವಾಲುಗಳ ಜೊತೆಗೆ ವೈಯಕ್ತಿಕ ಬದುಕಿನ ಕ್ಷಣಗಳನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ.

- ಪ್ರಿಯಾ ಕೆರ್ವಾಶೆ

- ‘ಸಪ್ತಸಾಗರ’ದ ಪುಟ್ಟಿಯಾಗಿದ್ದವರು ಏಕ್‌ದಂ ಯುವರಾಣಿಯಾಗಿ ಗಮನಸೆಳೆದಿದ್ದೀರಿ, ಈ ಭಾರೀ ಯಶಸ್ಸಿನ ಬಗ್ಗೆ ?

‘ಸಪ್ತಸಾಗರದಾಚೆ ಎಲ್ಲೋ’ ಪುಟ್ಟಿ ಪಾತ್ರದಿಂದ ನನಗೆ ಆರಂಭದಲ್ಲೇ ಒಂದು ವ್ಯಾಲಿಡೇಶನ್‌ ಅಂದರೆ ಮಾನ್ಯತೆ ಸಿಕ್ಕಿತು. ನನ್ನ ವೃತ್ತಿ ಬದುಕಿನಲ್ಲಿ ಸರಿಯಾದ ಹಾದಿಯಲ್ಲಿದ್ದೇನೆ ಅನ್ನೋದನ್ನು ತೋರಿಸಿತು. ಆ ಬಳಿಕ ಬಂದ ಪಾತ್ರಗಳ ಮೂಲಕ ಪಕ್ಕದ್ಮನೆ ಹುಡುಗಿ ಇಮೇಜ್‌ನಲ್ಲೇ ಕಂಫರ್ಟ್‌ ಝೋನ್‌ ಸೃಷ್ಟಿಯಾಗಿತ್ತು. ಆದರೆ ಕಾಂತಾರದ ಈ ಪಾತ್ರ ಆ ಚೌಕಟ್ಟು ಮುರಿದು ನಾನು ಯುವರಾಣಿಯಂಥಾ ಪಾತ್ರವನ್ನೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ತಂದುಕೊಟ್ಟಿತು.

- ಕಾಂತಾರ ಚಾಪ್ಟರ್‌ 1ರಲ್ಲಿ ನಿಮ್ಮ ಪಾತ್ರಕ್ಕೆ ಭಿನ್ನ ಶೇಡ್‌ಗಳಿದ್ದರೂ ಜನ ನಿಮ್ಮನ್ನು ಆರಾಧನಾ ದೃಷ್ಟಿಯಲ್ಲೇ ನೋಡುತ್ತಿದ್ದಾರಲ್ಲಾ, ಇದು ಏನನ್ನು ಸೂಚಿಸುತ್ತಿದೆ?

ಜನ ಆ ಪಾತ್ರದಲ್ಲಿನ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಆ ಮೆಚ್ಯೂರಿಟಿ ಪ್ರೇಕ್ಷಕರಿಗಿದೆ. ಈ ಸಿನಿಮಾದ ನನ್ನ ಪಾತ್ರದ ನರೇಶನ್‌ ಕೇಳಿದಾಗ ಟೆನ್ಶನ್ ಆಗಿತ್ತು. ಇದನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಆತಂಕವಿತ್ತು. ಆದರೆ ಕಥೆ ಅದ್ಭುತವಾಗಿತ್ತಲ್ಲಾ, ಟೆನ್ಶನ್‌ ಸೈಡಿಗಿಟ್ಟು ಪಾತ್ರ ಮಾಡಿದೆ. ಪುಟ್ಟಿಯ ಪಾತ್ರವನ್ನು ಒಪ್ಪಿಕೊಂಡ ಮಂದಿ ಕನಕವತಿಯನ್ನೂ ಮೆಚ್ಚಿಕೊಂಡರು. ಇದರಿಂದ ಒಂದು ಸ್ಪಷ್ಟವಾಗಿದೆ, ಬರೀ ಒಂದು ಶೇಡ್‌ನ ಪಾತ್ರಗಳಿಗಷ್ಟೇ ನಾನು ಅಂಟಿಕೊಳ್ಳಬೇಕಿಲ್ಲ. ಸ್ವತಂತ್ರವಾಗಿ ಎಕ್ಸ್‌ಪ್ಲೋರ್‌ ಮಾಡಬಹುದು. ಜನ ಲೇಬಲ್‌ಗಿಂತಲೂ ಪರ್ಫಾಮೆನ್ಸ್‌ ನೋಡುತ್ತಾರೆ.

- ಎರಡು ಭಿನ್ನ ಶೇಡ್‌ಗಳಲ್ಲಿ ತೊಡಗಿಸಿಕೊಂಡದ್ದು ಹೇಗಿತ್ತು?

ಎರಡು ಭಿನ್ನ ಭಾವಗಳ ಪ್ರದರ್ಶನದ ಜೊತೆಗೆ ಯುವರಾಣಿಯ ಗತ್ತು, ಲಾಲಿತ್ಯ, ಸಮರ ಕಲೆಯ ಕೌಶಲ್ಯ, ತುಳುನಾಡಿನ ಕನ್ನಡ ಭಾಷೆಯ ಉಚ್ಛರಣೆ ಹೀಗೆ ತುಂಬ ಕಲಿಕೆ ಇತ್ತು. ಬರಹಗಾರರಾದ ಅನಿರುದ್ಧ್‌ ಮಹೇಶ್‌, ಶನೀಲ್‌ ಗೌತಮ್‌ ಕರಾವಳಿ ಭಾಷೆ ಕಲಿಸಿದರು. ತಿಂಗಳ ಕಾಲ ಹೊಂಬಾಳೆ ಸಂಸ್ಥೆ ಕುದುರೆ ಸವಾರಿ ತರಬೇತಿಗೆ ವ್ಯವಸ್ಥೆ ಮಾಡಿತ್ತು. ಸೆಟ್‌ನಲ್ಲೇ ಕತ್ತಿ ವರಸೆ ಕಲಿಸಿದರು. ಚಿತ್ರತಂಡದ ಬೆಂಬಲದಿಂದ ಇದೆಲ್ಲ ಸಾಧ್ಯವಾಯಿತು.

- ಥೇಟರಿನಲ್ಲಿ ಕೂತು ನಿಮ್ಮ ಪಾತ್ರವನ್ನು ನೀವು ನೋಡಿದಾಗ ಹೇಗನಿಸಿತು?

ಅದು ನನಗೆ ಕಷ್ಟ. ನನ್ನ ಪಾತ್ರವನ್ನು ನೋಡಿದಾಗ ಬಹಳ ಕಾನ್ಶಿಯಸ್ ಆಗ್ತೀನಿ. ಉಳಿದೆಲ್ಲರ ನಟನೆಯನ್ನೂ ಎನ್‌ಜಾಯ್‌ ಮಾಡಿದೆ. ಅದರಲ್ಲೂ ರಥದ ಸನ್ನಿವೇಶ ನನ್ನ ಫೇವರಿಟ್‌. ನನ್ನ ಪಾತ್ರ ಬಂದಾಗ ಮಾತ್ರ ಕಸಿವಿಸಿಯಿಂದ ಮಿಸುಕಾಡುತ್ತಿದ್ದೆ.

- ನಿಮ್ಮ ಪಕ್ಕ ಕೂತು ಸಿನಿಮಾ ನೋಡಿದ ಅಮ್ಮ, ತಂಗಿ ಏನಂದ್ರು?

ತಂಗಿ ನನ್ನ ಕಟು ವಿಮರ್ಶಕಿ. ಅಮ್ಮನದು ಮೃದು ಸ್ವಭಾವ. ಅದರಲ್ಲೂ ಮೊದಲೆಲ್ಲ ಆಡಿಶನ್‌ಗೆ ವೀಡಿಯೋ ಕಳಿಸಬೇಕಾದರೆ ತಂಗಿಯೇ ಕ್ಯಾಮರ ವುಮೆನ್, ಅಮ್ಮ ಡೈರೆಕ್ಟರ್‌. ಆಗಲೂ ತಂಗಿ ಸರಿಯಾದ ನಟನೆ ಬರುವ ಟೇಕ್‌ ಮೇಲೆ ಟೇಕ್‌ ತೆಗೆದುಕೊಳ್ಳುತ್ತಿದ್ದಳು. ಆಕೆ ಮತ್ತು ಅಮ್ಮ ನನ್ನನ್ನು ಬಹಳ ಸಪೋರ್ಟ್‌ ಮಾಡುತ್ತಾರೆ.

- ಸಿನಿಮಾ ಒತ್ತಡಗಳ ನಡುವೆ ಮಿ ಟೈಮ್‌ ಮಿಸ್‌ ಮಾಡಿಕೊಳ್ತಿದ್ದೀರಾ?

ಖಂಡಿತಾ ಇಲ್ಲ. ನಾನು ಬಹಳ ಇಷ್ಟಪಟ್ಟು ಬಂದ ಕ್ಷೇತ್ರ ಇದು. ಇಲ್ಲಿ ಬ್ಯುಸಿಯಾಗಿದ್ದರೇ ಖುಷಿ. ಉಳಿದಂತೆ ನನಗೆ ಓದೋದಿಷ್ಟ. ನಾನು ಜರ್ನಿಯ ನಡುವೆ ಓದುತ್ತಿರುತ್ತೇನೆ. ಕಾಂತಾರ 1 ಸಿನಿಮಾ ಶೂಟಿಂಗ್‌ ಟೈಮಲ್ಲಂತೂ ಆ ಕಾಡಿನಲ್ಲಿ ನೆಟ್‌ವರ್ಕ್‌ ಒಂಚೂರೂ ಸಿಕ್ತಿರಲಿಲ್ಲ. ಮೊಬೈಲಿಗೂ ಕಲ್ಲಿಗೂ ವ್ಯತ್ಯಾಸ ಇರಲಿಲ್ಲ. ಬ್ರೇಕ್‌ನಲ್ಲಿ ನಾನು ಓದುತ್ತಿದ್ದೆ. ಉಳಿದವರು ಕ್ರಿಕೆಟ್‌, ಲೂಡೋ ಆಡ್ತಿದ್ರು. ಸದ್ಯಕ್ಕೀಗ ಎಸ್‌ ಎಲ್‌ ಭೈರಪ್ಪ ಅವರ ‘ಪರ್ವ’ ಕಾದಂಬರಿ ಓದುತ್ತಿದ್ದೇನೆ. ಎಲಿಫ್‌ ಷಫಕ್‌ ಎಂಬ ಟರ್ಕಿ ಲೇಖಕಿಯ ಪುಸ್ತಕ ಓದುತ್ತಿದ್ದೇನೆ.

- ಟಾಕ್ಸಿಕ್‌, ಡ್ರ್ಯಾಗನ್‌ ಸಿನಿಮಾ ಕೆಲಸ ಎಲ್ಲೀವರೆಗೆ ಬಂತು? 

ಡ್ರ್ಯಾಗನ್‌ ಸಿನಿಮಾದ ನನ್ನ ಪಾತ್ರದ ಶೂಟಿಂಗ್‌ ನಡೆಯುತ್ತಿದೆ. ಜೂನಿಯರ್‌ ಎನ್‌ಟಿಆರ್‌ ವ್ಯಕ್ತಿತ್ವ, ಪ್ರಶಾಂತ್‌ ನೀಲ್‌ ಅವರ ಕ್ರಿಯೇಟಿವ್‌ ಮೈಂಡ್‌ ಬಹಳ ಇಷ್ಟವಾಯ್ತು. ಟಾಕ್ಸಿಕ್‌ ಬಗ್ಗೆ ಈಗೇನೂ ಮಾತಾಡೋ ಹಾಗಿಲ್ಲ. ಉಳಿದಂತೆ ಒಂದೊಳ್ಳೆ ಟೀಮ್‌, ಚೆನ್ನಾಗಿರುವ ಕಥೆ ಮತ್ತು ನನ್ನ ಪಾತ್ರ ಕಥೆಗೆ ಏನು ಕೊಡುಗೆ ಕೊಡುತ್ತದೆ ಅನ್ನೋದನ್ನು ಗಮನಿಸಿ ಪಾತ್ರವನ್ನು ಆಯ್ಕೆ ಮಾಡಿಕೊಳ್ತೀನಿ. ಸ್ಕ್ರೀನ್‌ ಟೈಮ್‌ ಬಗ್ಗೆ ತಲೆಕೆಡಿಸಿಕೊಳಲ್ಲ.