ಸಾರಾಂಶ
ಧಾರವಾಡ: ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯ ಬದಲಾಗಿ ವೈಜ್ಞಾನಿಕ ಚಿಂತನೆ ಮೂಲಕ ಕಡಿಮೆ ನೀರಿನ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿ ಮೂಲಕ ಮಣ್ಣಿನ ಜೈವಿಕ ಗುಣಧರ್ಮ ಉಳಿಸಿಕೊಳ್ಳಲು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಸಹ ಮೂಡಿಸಬೇಕು ಎಂದರು.ರೈತರು ಗ್ರಾಹಕ ರಕ್ಷಣಾ ಆಯೋಗದ ಪ್ರಯೋಜನ ಪಡೆದುಕೊಳ್ಳಬೇಕು. ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಉತ್ಪಾದಕರು ಮತ್ತು ಮಾರಾಟಗಾರರಿಂದ ಯಾವುದೇ ನಷ್ಟವಾಗಿದ್ದಲ್ಲಿ ಕಾನೂನು ನೆರವು ಪಡೆದುಕೊಳ್ಳಬಹುದು ಎಂಬ ಸಲಹೆ ನೀಡಿದರು.
ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ. ಹಿರೇಮಠ ಹವಾಮಾನ ವೈಪರಿತ್ಯ ಕಾರಣದಿಂದ ಇಂದು ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಅರಣ್ಯ ಸಂಪನ್ಮೂಲದ ನಾಶದಿಂದಾಗಿ ಮಳೆ ಅನಿಶ್ಚಿತತೆ ಇದೆ. ನೈಸರ್ಗಿಕ ಸಂಪನ್ಮೂಲ ಕೇವಲ ಮಾನವರಿಗೆ ಮಾತ್ರವಲ್ಲದೇ ಸಕಲ ಜೀವ ರಾಶಿಗಳಿಗೂ ಸಂಬಂಧಿಸಿದ್ದಾಗಿದೆ. ಇಂದು ಮಾನವ ನಿರ್ಮಿತ ಕಾರಣಗಳಿಂದಾಗಿ ಜೀವ ವೈವಿದ್ಯ ವಿನಾಶದ ಅಂಚಿಕೆ ತಲುಪುತ್ತಿದೆ ಎಂದರು.ದೇಶದಲ್ಲಿನ ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.ವಾಲ್ಮಿ ನಿರ್ದೇಶಕ ಬಿ.ವೈ. ಬಂಡಿವಡ್ಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷದ ವಿಶ್ವ ಜಲ ದಿನಾಚರಣೆ ಘೋಷವಾಕ್ಯ - ಹಿಮನದಿಗಳ ಸಂರಕ್ಷಣೆ. ಭೂಮಂಡಲದ ಉತ್ತರ ಮತ್ತು ದಕ್ಷಿಣ ಭಾಗ ಸಂಪೂರ್ಣವಾಗಿ ಮಂಜಿನಿಂದ ಆವೃತ್ತವಾಗಿದೆ. ಭಾರತಕ್ಕೆ ಕಿರೀಟದಂತಿರುವ ಹಿಮಾಲಯ ಪರ್ವತ ಶ್ರೇಣಿಗಳು ಶುದ್ಧ ನೀರಿನ ಮೂಲಗಳು. ಜಾಗತಿಕ ಹವಾಮಾನ ವೈಪರಿತ್ಯದಿಂದ ಹಿಮಾಲಯ ಪರ್ವತ ಪ್ರದೇಶದಾದ್ಯಂತ ತಾಪಮಾನ ಹೆಚ್ಚಾಗುತ್ತಿದೆ. ಹಿಮದ ಕರಗುವಿಕೆಗೂ ಮತ್ತು ನಮಗೂ ಏನೂ ಸಂಬಂಧವಿಲ್ಲವೆಂದು ಭಾವಿಸುವಂತಿಲ್ಲ. ಪ್ರಸ್ತುತ ಜಲ ಮೂಲಗಳ ಒತ್ತುವರಿ, ಅರಣ್ಯ ನಾಶ, ಕೈಗಾರೀಕರಣ, ನಗರೀಕರಣ, ತ್ಯಾಜ್ಯದ ನಿರ್ವಹಣೆ ಸಮಸ್ಯೆ, ಪ್ಲಾಸಿಕ್ ಬಳಕೆ, ರಾಸಾಯನಿಕ ಗೊಬ್ಬರ ಬಳಕೆ ಇವೆಲ್ಲವೂ ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿವೆ. ಜಾಗತಿಕವಾಗಿ ಇಂಗಾಲದ ಪ್ರಮಾಣದ ಏರಿಕೆಯಿಂದ ಹಿಮದ ಕರಗುವಿಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಹಗಳು, ಅಂತರ್ಜಲ ಕುಸಿತ, ಸಮುದ್ರದ ಮಟ್ಟದ ಏರಿಕೆಯಂಥಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಪ್ರಗತಿಪರ ರೈತರಾದ ಪುಲಕೇಶಿ ನಾದ್ರೇಕರ, ಎಚ್.ಬಿ. ಸತೀಶ, ಡಿ. ನಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.