ಸಾರಾಂಶ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು ಕಡಿಮೆ ನೀರಿನಲ್ಲಿಯೂ ರೈತರಿಗೆ ಆರ್ಥಿಕವಾಗಿ ಲಾಭ ತರುವ ದೂರದಲ್ಲೆಲ್ಲೋ ಕಾಣಸಿಗುತ್ತಿದ್ದ ಡ್ರ್ಯಾಗನ್ ಹಣ್ಣಿನ ಬೆಳೆ ಬಯಲು ಸೀಮೆಗೆ ಕಾಲಿರಿಸಿದ್ದು ತಾಲೂಕಿನ ಓದ್ನೋಬಯ್ಯನಹಟ್ಟಿಯ ಯುವ ರೈತರು ಡ್ರ್ಯಾಗನ್ ಬೆಳೆದು ಯಶಸ್ವಿಯಾಗಿದ್ದಾರೆ.ತಾಲೂಕಿನ ಓದ್ನೋಬಯ್ಯನಹಟ್ಟಿ ಎಂಬ ಸಣ್ಣ ಹಳ್ಳಿಯಲ್ಲಿ ಯುವ ರೈತನೊಬ್ಬ ತನ್ನ ಎರಡು ಎಕರೆಯ ಕೃಷಿ ಭೂಮಿಯಲ್ಲಿ ಡ್ರ್ಯಾಗನ್ ಬೆಳೆ ಬೆಳೆದಿದ್ದಾನೆ. ಎರಡು ವರ್ಷಗಳ ಹಿಂದೆ ನಾಟಿ ಮಾಡಿದ್ದ ಬೆಳೆ ಈಗಾಗಲೇ ಕೈಗೆ ಬಂದಿದ್ದು ಎರಡು ಬಾರಿ ಕಟಾವು ಮಾಡಲಾಗಿದೆ.
ಕಡಿಮೆ ತೇವಾಂಶ ಇರುವ ಒಣ ಭೂಮಿ ಈ ಬೆಳೆಗೆ ಸೂಕ್ತವಾಗಿದ್ದು ಪ್ರತಿ ಗಿಡಕ್ಕೆ ಕಲ್ಲುಕಂಬ ನೆಟ್ಟು, ಮೇಲ್ಭಾಗದಲ್ಲಿ ಟೈರ್ ಅಳವಡಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿಯಿಂದ ಸಸಿಗಳನ್ನು ತರಿಸಿ 4 ಸಾವಿರ ಗಿಡಗಳನ್ನು ನೆಟ್ಟಿದ್ದು ಸಂಪೂರ್ಣವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಅಲ್ಪ ನೀರಿನ ತೇವಾಂಶದಲ್ಲಿ ಉತ್ತಮ ಬೆಳೆ ಬೆಳೆದು ವಾರ್ಷಿಕ 5 ಲಕ್ಷ ರು. ಗಳಿಸುತ್ತಿದ್ದು ಡ್ರ್ಯಾಗನ್ ಆರ್ಥಿಕವಾಗಿ ಕೈ ಹಿಡಿದಿದೆ.ಇಂದಿನ ಜನಪ್ರಿಯ ಹಣ್ಣುಗಳಲ್ಲಿ ಡ್ರ‍್ಯಾಗನ್ ಫ್ರೂಟ್ (ಹಣ್ಣು) ಒಂದಾಗಿದೆ. ಕಳ್ಳಿ ಜಾತಿಗೆ ಸೇರಿದ ಈ ಬೆಳೆ ಉಷ್ಣ ಪ್ರದೇಶಕ್ಕೆ ಸೂಕ್ತ ಸ್ಥಳವಾಗಿದೆ. ವಿಶಿಷ್ಟ ಆಕಾರ ಮತ್ತು ಸಮೃದ್ಧ ಪೌಷ್ಟಿಕಾಂಶ, ರೋಮಾಂಚಕ ಬಣ್ಣಗಳಿಂದಾಗಿ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿರುವ ಈ ಹಣ್ಣಿನ ಬೆಳೆ ಬಿಸಿಲ ನಾಡಿಗೆ ಮೆಲ್ಲನೆ ಕಾಲಿರಿಸಿದ್ದು. ತಾಲೂಕಿನಲ್ಲಿ ಈಗಾಗಲೇ ಹತ್ತು ಎಕರೆ ವಿಸ್ತೀರ್ಣದಲ್ಲಿ ಡ್ರ್ಯಾಗನ್ ಬೆಳೆ ಕಾಣಸಿಗುತ್ತಿದೆ.
ಬಡವರ ಪಾಲಿಗೆ ಬಂಗಾರದ ಬೆಲೆ ಸಿಗುವ ರಾಸಾಯನಿಕ ಬಳಕೆ ಇಲ್ಲದೆ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸಲಿದ್ದು ನೈಸರ್ಗಿಕ ಕೃಷಿ, ಆಧುನಿಕ ತಂತ್ರಜ್ಞಾನಗಳೆರಡನ್ನೂ ಅಳವಡಿಸಿಕೊಂಡು ಪ್ರಯೋಗಶೀಲತೆ ಇದ್ದಲ್ಲಿ ಬಯಲು ಸೀಮೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲ್ಲಿ ಯಶಸ್ವಿಗಳಿಸಬಹುದು ಎನ್ನಲಾಗುತ್ತಿದೆ.400 ರಿಂದ 500 ಗ್ರಾಂ ತೂಕದ ಹಣ್ಣು ಪ್ರತಿ ಗಿಡಕ್ಕೆ 25 ರಿಂದ 30 ಕೆಜಿ ದೊರೆಯುತ್ತದೆ. ಪ್ರತಿ 80 ರಿಂದ 100 ರು. ಸಿಗಲಿದೆ. ಭರ್ಜರಿ ಇಳುವರಿ ದೊರೆತಿದೆ. ಮೊದಲ ಕೊಯ್ಲಿನಲ್ಲಿ 5 ಲಕ್ಷಕ್ಕೂ ಹೆಚ್ಚಿನ ಲಾಭ ಸಿಕ್ಕಿದೆ ಎನ್ನುವುದು ರೈತ ರವಿ ಅಭಿಪ್ರಾಯ.
ಕಳ್ಳಿ ಜಾತಿಗೆ ಸೇರಿದ ಡ್ರ್ಯಾಗನ್ ಬಳ್ಳಿಯಲ್ಲಿ ಉದ್ದನೆಯ ಎಲೆಗಳು ದಟ್ಟವಾಗಿ ಹರಡಿಕೊಳ್ಳಲಿವೆ. ಎಲೆಯ ಅಂಚಿನಲ್ಲಿ ಸಣ್ಣ ಮುಳ್ಳುಗಳಿದ್ದು ಎಲೆಯ ತುದಿಯಲ್ಲಿ ಹಣ್ಣು ಬಿಡಲಿದೆ. ತಾಲೂಕಿನ ಕಸಬಾ ಹೋಬಳಿಯ ಓದ್ನೋಬಯ್ಯನಹಟ್ಟಿ 2 ಸೇರಿದಂತೆ ಕೋನಸಾಗರ 2, ಕೊಂಡ್ಲಹಳ್ಳಿ 1 ಹಾಗೂ ದೇವಸಮುದ್ರ ಹೋಬಳಿಯ ಬೊಮ್ಮಕ್ಕನಹಳ್ಳಿ 2, ಕರಡಿಹಳ್ಳಿ 2 ಒಟ್ಟು 9 ಎಕರೆಯಲ್ಲಿ ಡ್ರ್ಯಾಗನ್ ಬೆಳೆ ವಿಸ್ತರಣೆಯಾಗಿದೆ. ಸರ್ಕಾರ ರೈತರಿಗೆ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಬೆಳೆಗಾರರ ಸಂಖ್ಯೆ ಹೆಚ್ಚಲಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.