ಬಿಳಿಯೂರು ಅಣೆಕಟ್ಟು ಪ್ರಭಾವ: ಉಪ್ಪಿನಂಗಡಿ ‘ಜಲಸಮೃದ್ಧ’

| Published : Mar 27 2025, 01:08 AM IST

ಸಾರಾಂಶ

ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನಿಂದಾಗಿ ನದಿಯ ಮೇಲ್ಭಾಗದಲ್ಲಿ ತುಂಬಿರುವ ಹಿನ್ನೀರು ಪರಿಸರದಲ್ಲಿ ಅಂತರ್ಜಲ ವೃದ್ಧಿಸಲು ಕಾರಣವಾಗಿದೆ. ಕೊಳವೆಬಾವಿ, ಕೆರೆ ಬಾವಿಗಳಲ್ಲಿ ನೀರಿನ ಸಂಗ್ರಹದಲ್ಲಿ ವೃದ್ಧಿ ಕಾಣಿಸಿದ್ದು, ಸುತ್ತಮುತ್ತಲ ನಾಗರಿಕರಿಗೆ ಸಂತಸ ಮೂಡಿದೆ. ಆದರೆ ಮೀನು ಬೇಟೆಯಿಂದ ನೀರು ಕಲುಷಿತವಾಗುವ ಆತಂಕ ಮೂಡಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನಿಂದಾಗಿ ನದಿಯ ಮೇಲ್ಭಾಗದಲ್ಲಿ ತುಂಬಿರುವ ಹಿನ್ನೀರು ಪರಿಸರದಲ್ಲಿ ಅಂತರ್ಜಲ ವೃದ್ಧಿಸಲು ಕಾರಣವಾಗಿದೆ. ಕೊಳವೆಬಾವಿ, ಕೆರೆ ಬಾವಿಗಳಲ್ಲಿ ನೀರಿನ ಸಂಗ್ರಹದಲ್ಲಿ ವೃದ್ಧಿ ಕಾಣಿಸಿದ್ದು, ಸುತ್ತಮುತ್ತಲ ನಾಗರಿಕರಿಗೆ ಸಂತಸ ಮೂಡಿದೆ.

ಬಿಳಿಯೂರು ಅಣೆಕಟ್ಟಿನಲ್ಲಿ ಪ್ರಸಕ್ತ ೪ ಮೀಟರ್ ಎತ್ತರದ ಗೇಟುಗಳನ್ನು ಅಳವಡಿಸಲಾಗುತ್ತಿರುವುದರಿಂದ ನದಿಯಲ್ಲಿ ೦.೨ ಟಿಎಂಸಿ ನೀರು ಸಂಗ್ರವಾಗಿದೆ. ಕುಮಾರಧಾರಾ ನದಿ ಉಪ್ಪಿನಂಗಡಿಯಲ್ಲಿ ನೇತ್ರಾವತಿಯನ್ನು ಸಂಗಮಗೊಂಡು ಹರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೀವಂತವಾಗಿದ್ದು, ಅಣೆಕಟ್ಟಿನಿಂದ ಧುಮ್ಮಿಕ್ಕಿ ಹರಿಯುತ್ತಿದೆ.

ಪ್ರಸಕ್ತ ಇದು ಬಹು ಗ್ರಾಮ ಕುಡಿಯುವ ಯೋಜನೆಗೆ ಬಳಕೆಯಾಗುತ್ತಿದೆಯಾದರೂ , ಪ್ರಧಾನವಾಗಿ ಮಂಗಳೂರು ನಗರಕ್ಕೆ ನೀರು ಸರಬರಾಜುಗೊಳ್ಳಲಿರುವ ತುಂಬೆ ಅಣೆಕಟ್ಟಿಗೆ ಅಗತ್ಯಬಿದ್ದರೆ ನೀರು ಒದಗಿಸುವ ಹೆಚ್ಚುವರಿ ಜಲಾಶಯವಾಗಿ ಇಲಾಖೆಯಿಂದ ಪರಿಗಣಿಸಲ್ಪಡುತ್ತಿದೆ.

ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರಲ್ಲೂ ನೀರು ಸಂಗ್ರಹಣೆಗೊಳ್ಳುವುದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಲಾದ ನೆಕ್ಕಿಲಾಡಿಯ ಕಿಂಡಿ ಅಣೆಕಟ್ಟಿನಲ್ಲಿ ಗೇಟು ಅಳವಡಿಸದೆ ನೀರು ಸಂಗ್ರಹಗೊಂಡಿದೆ. ಒಟ್ಟಾರೆ ಪರಿಸರದ ನಾಲ್ಕು ದಿಕ್ಕೂಗಳಲ್ಲಿಯೂ ಅಂತರ್ಜಲ ವೃದ್ದಿಯಾಗಿರುವುದು ಈ ಬಾರಿಯ ಬೇಸಗೆಯಲ್ಲಿ ನೀರಿನ ಕೊರತೆ ಕಾಣಿಸದೆಂಬ ವಿಶ್ವಾಸ ಮೂಡಿಸಿದೆ.

ಆದರೆ ಈ ಬಾರಿ ಈಗಾಗಲೇ ೪೦ ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡಿರುವ ಈ ಪರಿಸರದಲ್ಲಿ ಬಿಸಿ ತಾಪಮಾನಕ್ಕೆ ಸಂಗ್ರಹಣೆಗೊಂಡ ನೀರು ವೇಗವಾಗಿ ಆವಿಯಾಗುವ ಸಾಧ್ಯತೆಯೂ ಇದ್ದು, ಮುಂಬರುವ ಬೇಸಗೆಯಲ್ಲಿ ಎಲ್ಲೆಡೆ ನೀರಿನ ಕೊರತೆ ಸಂಭವಿಸುವ ಸಾಧ್ಯತೆಯ ಭೀತಿ ಅಂದಾಜಿಸಲಾಗುತ್ತಿದೆ.

ಉದ್ಭವ ಲಿಂಗ ಪೂಜೆಗೆ ಅವಕಾಶ ಆಗ್ರಹ:

ಕಳೆದ ವರ್ಷದಿಂದ ನೇತ್ರಾವತಿ ನದಿಯ ಒಡಲು ಹಿನ್ನೀರಿನಿಂದ ಭರ್ತಿಯಾಗುತ್ತಿರುವುದರಿಂದ ಪುರಾಣ ಪ್ರಸಿದ್ಧ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಉತ್ಸವಾದಿಗಳು ದೇವಾಲಯ ಪರಿಸರಕ್ಕೆ ಸೀಮಿತವಾಗಿದ್ದು, ನದಿ ಒಡಲಿನಲ್ಲಿರುವ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.

ದೇವಳದ ವರ್ಷವಾಧಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳು ನದಿಯ ಒಡಲಿನ ಮರಳಿನಲ್ಲಿ ಕುಳಿತು ಜಾತ್ರೆಯ ಸಂಭ್ರಮ ಸವಿಯುತ್ತಿದ್ದ ನಡೆಗಳಿಗೂ ಈಗ ಅವಕಾಶ ಇಲ್ಲದಂತಾಗಿದೆ. ಈ ಕಾರಣಕ್ಕೆ ಬಿಳಿಯೂರು ಅಣೆಕಟ್ಟಿನಲ್ಲಿ ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳ ವರೆಗೆ ೨ ಮೀಟರ್ ಗೇಟು ಅಳವಡಿಸಿ ಮಾರ್ಚ್ ಬಳಿಕ ಅದನ್ನು ನಾಲ್ಕು ಮೀಟರ್‌ಗೆ ಎತ್ತರಿಸುವ ಮೂಲಕ ಪರಿಸರದ ಕಾರ್ಯಕ್ರಮಗಳಿಗೂ ನದಿಯ ಒಡಲು ಲಭಿಸುವಂತೆ ಮಾಡಬಹುದೆಂಬ ಸಲಹೆ ಭಕ್ತ ಜನತೆಯಿಂದ ವ್ಯಕ್ತವಾಗಿದೆ.

ಮೀನು ಬೇಟೆ ನಿಷೇಧ ಆಗ್ರಹ:

ಪ್ರಸಕ್ತ ಅನಿವಾರ್ಯವೆಂಬಂತೆ ಉಪ್ಪಿನಂಗಡಿ ಪೇಟೆಯ ತ್ಯಾಜ್ಯ ನೀರೆಲ್ಲಾ ನೇತ್ರಾವತಿ ನದಿಯ ಹಿನ್ನೀರು ಸೇರುತ್ತಿದ್ದು, ನದಿಯ ಪರಿಶುದ್ಧತೆ ಸಂಶಯಿಸುವಂತೆ ಮಾಡಿದೆ. ಪರಿಸರದೆಲ್ಲೆಡೆ ರೋಗ ರುಜಿನಗಳು ಕಾಣಿಸಿಕೊಂಡಾಗ ನದಿಯ ಹಿನ್ನೀರಿನಲ್ಲಿಯೇ ಸೊಳ್ಲೆ ಉತ್ಪಾದನೆಯಾಗುತ್ತಿದೆ ಎಂಬ ಆರೋಪಗಳು ಕೇಳಿಸಿತ್ತು. ಆದರೆ ನದಿಯಲ್ಲಿ ಮೀನುಗಳಿರುವುದರಿಂದ ಸೊಳ್ಳೆ ಉತ್ಪಾದನೆ ಸಾಧ್ಯವಿಲ್ಲವೆಂದು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದರು.

ಆದರೆ ದಿನಬೆಳಗಾದರೆ ನದಿಯಲ್ಲಿ ತೆಪ್ಪದ ಮೂಲಕ , ಬೋಟಿನ ಮೂಲಕ ಮೀನುಗಾರಿಕೆ ಮಾಡುವ ಮಂದಿಯಿಂದಾಗಿ ನದಿಯ ಒಡಲಿನಲ್ಲಿನ ಮೀನುಗಳ ಸಂಖ್ಯೆ ಕರಗುತ್ತಿದ್ದು, ಇದರಿಂದಾಗಿ ನದಿಯ ಪರಿಶುದ್ಧತೆಗೆ ತೊಡಕಾಗಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲ ಸಮಯದ ವರೆಗೆ ನದಿಯಲ್ಲಿ ಮೀನುಗಾರಿಕೆ ನಿಷೇಧಿಸಬೇಕೆಂದು ನೆಲ ಜಲ ಸಂರಕ್ಷಣೆಯ ಮುಂದಾಳು ಕೈಲಾರ್ ರಾಜಗೋಪಾಲ ಭಟ್ ಅಗ್ರಹಿಸಿದ್ದಾರೆ.

................ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿ , ನದಿ ನೀರಿನ ಸ್ವಚ್ಚತೆಯಲ್ಲಿ ಪ್ರಧಾನ ಪಾತ್ರವಹಿಸುವ ಮೀನುಗಳ ಸಂಖ್ಯಾ ಕುಸಿತಕ್ಕೆ ಕಾರಣವಾಗುತ್ತಿರುವ ಬಗ್ಗೆ ಸಹಜ ಕಳವಳವಿದೆ. ಈ ಬಗ್ಗೆ ತಹಸೀಲ್ದಾರ್‌ ಅವರನ್ನು ಸಂಪರ್ಕಿಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿ, ನದಿಯಲ್ಲಿ ಮೀನುಗಾರಿಕೆಯನ್ನು ತಡೆಗಟ್ಟಲು ಗಮನ ಹರಿಸಲಾಗುವುದು.

-ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ.