ಸಾರಾಂಶ
ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂವಾದ, ವಾದ-ವಿವಾದ, ಆಲೋಚಿಸಿ ಚರ್ಚಿಸಿ ಎಲ್ಲವನ್ನು ಸಮದೂಗಿಸಿ ಜನಪರ ಸುಗ್ರೀವಾಜ್ಞೆ ತರಲಾಗಿದೆ
ಗದಗ: ರಾಜ್ಯದಲ್ಲಿನ ಬಡವರು, ಶ್ರಮಿಕರಿಗೆ ಸಾಲ ಕೊಟ್ಟು ಶೋಷಣೆ ಮಾಡುತ್ತಿದ್ದವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೂಪಿಸಲಾಗಿರುವ ಮೈಕ್ರೋ ಸಾಲ, ಸಣ್ಣ ಸಾಲ ಬಲವಂತದ ವಸೂಲಿ ಪ್ರತಿಬಂಧಕ ಆದ್ಯಾದೇಶಕ್ಕೆ ರಾಜ್ಯಪಾಲರಿಂದ ಬುಧವಾರ ಒಪ್ಪಿಗೆ ಸಿಕ್ಕಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡಿ ಸಾಲ ಪಡೆದವರನ್ನು ಹಿಂಸಿಸುವ, ಒತ್ತೆ ಆಳುಗಳನ್ನಾಗಿ ಮಾಡಿಕೊಳ್ಳುವ, ದೈಹಿಕ ಹಿಂಸೆ ಮಾಡುವ ಅಕ್ರಮ ಕೃತ್ಯ ನಿಯಂತ್ರಿಸಲು ಮತ್ತು ಅಕ್ರಮ ಲೇವಾದೇವಿ ವ್ಯವಹಾರದ ಮೇಲೆ ನಿಯಂತ್ರಿಸಲು ಈ ಸುಗ್ರೀವಾಜ್ಞೆ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಲಿದೆ. ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಬಡವರ ರಕ್ಷಣೆಗೆ ಸರ್ಕಾರಕ್ಕೆ ಬಲ ಬಂದಂತಾಗಿದೆ. ಸಾಲಗಾರರಿಂದ ಜನರನ್ನು ರಕ್ಷಿಸಲು ಜನಪರ ಕಾನೂನು ಅವಶ್ಯವಿತ್ತು. ಸಾಲ ವಸೂಲಿ ಹೆಸರಲ್ಲಿ ಕಿರುಕುಳ, ಅಮಾನವೀಯ ಕೃತ್ಯ, ವಿಪರೀತ ಬಡ್ಡಿ, ಮೀಟರ್ ಬಡ್ಡಿ ದಂಧೆಗಳಿಗೆ ತಡೆ ನೀಡಬೇಕು ಎಂಬ ನಿಲುವು ಸರ್ಕಾರ ಹೊಂದಿದೆ ಎಂದರು.ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂವಾದ, ವಾದ-ವಿವಾದ, ಆಲೋಚಿಸಿ ಚರ್ಚಿಸಿ ಎಲ್ಲವನ್ನು ಸಮದೂಗಿಸಿ ಜನಪರ ಸುಗ್ರೀವಾಜ್ಞೆ ತರಲಾಗಿದೆ. ರೈತರ, ಮಹಿಳೆ, ಮಹಿಳಾ ಸ್ವಸಹಾಯ ಗುಂಪು, ಮಹಿಳಾ ರೈತರು, ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರು ಅಂಗಡಿಗಳಲ್ಲಿ ಕೆಲಸ ಮಾಡುವರು, ಬಡವರು, ಆರ್ಥಿಕವಾಗಿ ಹಿಂದುಳಿದವರ ರಕ್ಷಣೆ ಮಾಡಲು ಈ ಸುಗ್ರೀವಾಜ್ಞೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ನೋಂದಾಯಿತ ಅಲ್ಲದ, ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡುವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸಾಲ ಪಡೆದವರಿಗೆ ಒತ್ತಾಯ ಪೂರ್ವಕ ಕಿರುಕುಳ, ಅವರನ್ನು ಒತ್ತೆ ಆಳುಗಳಾಗಿ ಮಾಡಿಕೊಳ್ಳುವುದು ಕಾನೂನು ಬಾಹಿರ ಚಟುವಟಿಕೆ ಆಗಿತ್ತು. ಲೇವಾದೇವಿ ವ್ಯವ್ಯಹಾರ ಮಾಡುವರಿಂದ ಕಿರುಕುಳಕ್ಕೆ ಒಳಪ್ಪಟ್ಟವರನ್ನು ರಕ್ಷಣೆ ಮಾಡುವ ಕಾನೂನು ಅಗತ್ಯ ಇತ್ತು ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್ಪಿ ಬಿ.ಎಸ್. ನೇಮಗೌಡ ಇತರರು ಹಾಜರಿದ್ದರು.
ಜನರಿಗೆ ಕಿರುಕುಳ ನೀಡದೇ ನಿಯಮಾನುಸಾರ ಬಡ್ಡಿ ಪಡೆಯುವುದು, ನಿಯಮಾನುಸಾರ ಬಡ್ಡಿ ವಸೂಲಿ ಮಾಡುವವರಿಗೆ, ಬ್ಯಾಂಕ್ ಗಳಿಗೆ ಈ ಸುಗ್ರೀವಾಜ್ಞೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಕಾನೂನಾತ್ಮಕ ವ್ಯವಹಾರಕ್ಕೆ ತೊಂದರೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.