ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಶಾಲೆಯ ಸಾಹಿತ್ಯ ಕೆ. ಉಪ್ಪಾರ್ ಸೇರಿದಂತೆ ಜಿಲ್ಲೆಯ ವಿವಿಧ ಆರು ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಸಾಲಿನ ಗವರ್ನರ್ ಅವಾರ್ಡ್ ಪ್ರದಾನ ಮಾಡಲಾಯಿತು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜಭವನದಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ರಾಜ್ಯ ಪುರಸ್ಕಾರ್ ಪ್ರಶಸ್ತಿ ಸಮಾರಂಭದಲ್ಲಿ ಗೈಡ್ ವಿಭಾಗದಿಂದ ಹಾಸನದ ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಶಾಲೆಯ ಸಾಹಿತ್ಯ ಕೆ. ಉಪ್ಪಾರ್, ಸ್ಕೌಟ್ ವಿಭಾಗದಿಂದ ಹಳೇಬೀಡಿನ ಎಸ್.ಜಿ.ಆರ್. ಪಬ್ಲಿಕ್ ಶಾಲೆಯ ಪುಷ್ಕರ್ ಎಂ. ರಾಜ್, ರೇಂಜರ್ ವಿಭಾಗದಿಂದ ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಸ್ವಾತಿ ಎ.ಎಸ್, ರೋವರ್ ವಿಭಾಗದಿಂದ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ(ಸ್ವಾಯತ್ತ) ಕಾರ್ತಿಕ್ ಎಚ್.ಬಿ, ಕಬ್ಸ್ ವಿಭಾಗದಿಂದ ಹಾಸನದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಲಿಖಿತ್ ಎಸ್. ಗೌಡ, ಫ್ಲಾಕ್ ವಿಭಾಗದಿಂದ ಹಳೆಬೀಡಿನ ಎಸ್.ಜಿ.ಆರ್. ಪಬ್ಲಿಕ್ ಶಾಲೆಯ ತಾರುಣ್ಯ ಎಸ್.ಆರ್ ಇವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರವರು ಪ್ರಶಸ್ತಿ ಪ್ರದಾನ ಮಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಪ್ರತಿವರ್ಷ ಹಮ್ಮಿಕೊಳ್ಳುವ ರಾಜ್ಯಮಟ್ಟದ ರಾಜ್ಯ ಪುರಸ್ಕಾರ್ ಪರೀಕ್ಷೆಯಲ್ಲಿ ಉತ್ತೀರ್ಣವಾದ ಪ್ರತಿ ವಿಭಾಗದಿಂದ ಆಯ್ದ ಒಬ್ಬ ವಿದ್ಯಾರ್ಥಿಗೆ ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸುವ ಅವಕಾಶ ಕಲ್ಪಿಸಲಾಗುತ್ತದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಹೆಚ್ಚುವರಿ ಮುಖ್ಯ ಆಯುಕ್ತರು ಹಾಗೂ ಸಭಾಪತಿಗಳಾದ ಯು. ಟಿ. ಖಾದರ್, ರಾಜ್ಯ ಮುಖ್ಯ ಆಯುಕ್ತರಾದ ಪಿ. ಜಿ. ಆರ್. ಸಿಂಧ್ಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕೃತ ಮಕ್ಕಳಿಗೆ ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ. ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್. ಎಂ. ಪ್ರಿಯಾಂಕ, ಜಿಲ್ಲಾ ಪದಾಧಿಕಾರಿಗಳಾದ ಜಯಾ ರಮೇಶ್, ಸ್ಟೀಫನ್ ಪ್ರಕಾಶ್, ಎಂ.ಬಿ. ಗಿರಿಜಾಂಬಿಕ, ರಮೇಶ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.