ರಿಲ್ಯಾಕ್ಸ್ ಮೂಡ್‌ಗೆ ತೆರಳಿದೆ ಗೋವಿಂದ ಕಾರಜೋಳ

| Published : Apr 28 2024, 01:22 AM IST

ಸಾರಾಂಶ

ಲೋಕಸಭೆ ಚುನಾವಣೆಯ ಒತ್ತಡಗಳಿಂದ ಹೊರ ಬಂದಂತೆ ಕಂಡು ಬಂದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಪಕ್ಕದ ಬೀದಿ ಬದಿ ಹೋಟೆಲ್‌ನಲ್ಲಿ ನಾಗರಿಕರೊಂದಿಗೆ ಕುಳಿತು ಚಹಾ ಸೇವಿಸಿದರು.

ಚಿತ್ರದುರ್ಗ: ಲೋಕಸಭೆ ಚುನಾವಣೆಯ ಒತ್ತಡಗಳಿಂದ ಹೊರ ಬಂದಂತೆ ಕಂಡು ಬಂದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಪಕ್ಕದ ಬೀದಿ ಬದಿ ಹೋಟೆಲ್‌ನಲ್ಲಿ ನಾಗರಿಕರೊಂದಿಗೆ ಕುಳಿತು ಚಹಾ ಸೇವಿಸಿದರು. ಮತದಾನ ಹೇಗಾಯ್ತು, ಯಾವ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹೋಟೆಲ್‌ನಲ್ಲಿ ಕುಳಿತಿರುವವರ ಬಳಿ ಚರ್ಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆ ಇರುವುದು ಬೇಸರದ ಸಂಗತಿ ಎಂದರು.

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭೆ ಹಾಗೂ ಶಿರಾ ಪಾವಗಡ ಸೇರಿದಂತೆ ಮೂರು ಸಾವಿರದ ಹಳ್ಳಿಗಳಿಗೆ ಸುತ್ತಾಡಿ ಮತಯಾಚಿಸಲು ಸಮಯ ಸಾಕಾಗಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡೆ ಮತದಾರರನ್ನು ಭೇಟಿ ಮಾಡಿ ಮತ ಕೇಳಿದ್ದೇನೆ. ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಟ್ಟರೆ ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿರುವ ಜನ ದೇಶ ಸುಭದ್ರವಾಗಿರಬೇಕಾದರೆ ಯಾರ ಕೈಗೆ ಅಧಿಕಾರ ಕೊಡಬೇಕು. ಯಾರು ಈ ದೇಶದ ಪ್ರಧಾನಿಯಾಗಬೇಕೆಂಬ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಜಾಗೃತಿ ಮೂಡಿದೆ. ಈ ನಿಟ್ಟಿನಲ್ಲಿ ಜನ ಯೋಚಿಸಿ ಮತದಾನ ಮಾಡಿದ್ದಾರೆಂಬ ನಂಬಿಕೆಯಿದೆ. ಚುನಾವಣೆಯಲ್ಲಿ ಮಾತ್ರ ಪಕ್ಷದಿಂದ ಸ್ಪರ್ಧಿಸಿ ರಾಜಕೀಯ ಮಾಡುವುದು ಅನಿವಾರ್ಯ. ಮತದಾನ ಮುಗಿದ ನಂತರ ನಾನು ಕ್ಷೇತ್ರದ ಹದಿನೆಂಟುವರೆ ಲಕ್ಷ ಮತದಾರರ ಜನಪ್ರತಿನಿಧಿ. ಯಾವುದೇ ತಾರತಮ್ಯವಿಲ್ಲದೆ ನಿಷ್ಪಕ್ಷಪಾತವಾಗಿ ಎಲ್ಲರ ಸೇವೆ ಮಾಡಲು ಸಿದ್ಧ ಎಂದು ತಿಳಿಸಿದರು.

ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್‍ ಬೇದ್ರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.