ಸಾರಾಂಶ
ಹಿರಿಯೂರು: ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ಅವಶ್ಯಕವಾಗಿದೆ ಎಂದು ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಹೇಳಿದರು.
ತಾಲೂಕಿನ ವಾಣಿವಿಲಾಸಪುರ, ಲಕ್ಕವ್ವನಹಳ್ಳಿ, ಬಳಘಟ್ಟ, ಭರಮಗಿರಿ, ಕೂನಿಕೆರೆ ಕ್ಯಾತೆದೇವರಹಟ್ಟಿ, ದೊಡ್ಡಘಟ್ಟ ಸೇರಿದಂತೆ ವಿವಿಧ ಭಾಗಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಜೊತೆ ಮತಪ್ರಚಾರ ಕೈಗೊಂಡು ಮಾತನಾಡಿದರು.ಕೇಂದ್ರದಲ್ಲಿ ಎನ್‌ಡಿಎ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮತ್ತು ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದರ ಜೊತೆಗೆ ದೇಶದ ರಕ್ಷಣೆ, ಜನರ ನೆಮ್ಮದಿಯ ಬದುಕಿಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಸಚಿವರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಗೆಲ್ಲಲಿದ್ದು, ಚಿತ್ರದುರ್ಗ ಜಿಲ್ಲೆಯ ಮತದಾರರು ಸಹ ಹೆಚ್ಚು ಹೆಚ್ಚು ಮತಗಳನ್ನು ನೀಡುವ ಮೂಲಕ ಕಾರಜೋಳ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಬೇಕು.
ಕಾರಜೋಳ ಅನುಭವಿ ಹಾಗೂ ಹಿರಿಯ ರಾಜಕಾರಣಿಯಾಗಿರುವುದರಿಂದ ಜಿಲ್ಲೆಯ ಕೈಗಾರಿಕಾ ವಲಯ ವಿಸ್ತಾರಗೊಳಿಸಿ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯು ನೀರಾವರಿಯಿಂದಾಗಿ ಸಂಪದ್ಭರಿತವಾಗಿರುವಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿನ ಬದ್ಧತೆ ಮತ್ತು ಆಸಕ್ತಿಯಿಂದ ಧರ್ಮಪುರ ಕೆರೆಗೆ ನೀರು ಬಂದಿತ್ತು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿರುವ ಗೋವಿಂದ ಕಾರಜೋಳಗೆ ಮತ ನೀಡುವ ಜೊತೆಗೆ ಎಲ್ಲರಿಗೂ ಹೇಳಿ ಮತಹಾಕಿಸಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್, ಬಿಜೆಪಿ ಮುಖಂಡ ಎನ್ ಆರ್ ಲಕ್ಷ್ಮೀಕಾಂತ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿದ್ದಮ್ಮ ಮುಂತಾದ ಮುಖಂಡರುಗಳು ಹಾಜರಿದ್ದರು.