ಸೆಕ್ಯುರಿಟಿ ಏಜೆನ್ಸಿಗೆ ಶಿಕ್ಷಕರ ನೇಮಕ ಹೊಣೆ ಕಡೆಗೂ ರದ್ದು

| Published : May 29 2024, 01:30 AM IST

ಸಾರಾಂಶ

ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದ ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಸೆಕ್ಯುರಿಟಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಶಿಕ್ಷಕರ ನೇಮಕದ ಗುತ್ತಿಗೆಯನ್ನು ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದ ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಸೆಕ್ಯುರಿಟಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಶಿಕ್ಷಕರ ನೇಮಕದ ಗುತ್ತಿಗೆಯನ್ನು ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ಸೆಕ್ಯುರಿಟಿ ಏಜೆನ್ಸಿಗೆ ಶಿಕ್ಷಕರ ನೇಮಕದ ಗುತ್ತಿಗೆ ನೀಡಿರುವುದಕ್ಕೆ ವಿರೋಧ ವ್ಯಕ್ತವಾದ ಕಾರಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೌಖಿಕವಾಗಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿಯು, ಹೊರ ಗುತ್ತಿಗೆಯ ಆಧಾರದ ಮೇಲೆ ಶಿಕ್ಷಕರ ನೇಮಕಕ್ಕೆ ನೀಡಲಾಗಿದ್ದ ಎಲ್ಲ ಟೆಂಡರ್‌ಗಳ ಕಾರ್ಯಾದೇಶವನ್ನು ರದ್ದುಪಡಿಸಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಗಳವಾರ ಆದೇಶಿಸಿದ್ದಾರೆ.

ಮೇ 29ರಿಂದ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಅವಶ್ಯಕವಾಗಿರುವ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಎಸ್‌ಡಿಎಂಸಿ, ಸಿಡಿಸಿ ಮೂಲಕ ನಿಯೋಜನೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ವಲಯ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ಹೊರಡಿಸಲಾಗಿರುವ ಎಲ್ಲಾ ಟೆಂಡರ್‌ಗಳ ಕಾರ್ಯಾದೇಶ ರದ್ದು ಮಾಡುತ್ತಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.