ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ-ಮಂಡಳಿ, ಸ್ಥಳೀಯ ಸಂಸ್ಥೆ, ವಿಶ್ವವಿದ್ಯಾಲಯ ಸೇರಿದಂತೆ ಸರ್ಕಾರದ ಎಲ್ಲಾ ಸಂಸ್ಥೆಗಳೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (ಪಿಎನ್‌ಬಿ) ಹೊಂದಿರುವ ಎಲ್ಲಾ ಖಾತೆಗಳನ್ನು ಕೂಡಲೇ ಮುಕ್ತಾಯಗೊಳಿಸಬೇಕು ಎಂದು ಹಣಕಾಸು ಇಲಾಖೆ ಸುತ್ತೋಲೆ ಹೊರಡಿಸಿದೆ.
ಜತೆಗೆ ‘ಈ ಬ್ಯಾಂಕ್‌ಗಳಲ್ಲಿನ ಠೇವಣಿಗಳನ್ನು ಹಿಂಪಡೆಯಬೇಕು. ಇನ್ನು ಮುಂದೆ ಯಾವುದೇ ಠೇವಣಿ, ಹೂಡಿಕೆ ಮಾಡಬಾರದು. ಖಾತೆಗಳನ್ನು ಮುಕ್ತಾಯಗೊಳಿಸಿರುವ (ಕ್ಲೋಸ್) ಬಗ್ಗೆ ಸೆ.20ರ ಒಳಗಾಗಿ ಇಲಾಖೆಗೆ ವರದಿ ಸಲ್ಲಿಸಬೇಕು’ ಎಂದು ಹಣಕಾಸು ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ.ಪಿ. ಜಾಫರ್ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ತನ್ಮೂಲಕ ಎರಡೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ರಾಜ್ಯ ಸರ್ಕಾರದ ಎಲ್ಲಾ ಆರ್ಥಿಕ ವ್ಯವಹಾರಗಳಿಂದ ಹೊರಗಿಟ್ಟು, ಪರೋಕ್ಷವಾಗಿ ಕಪ್ಪು ಪಟ್ಟಿಗೆ ಸೇರಿಸಿದಂತಾಗಿದೆ.
ವಂಚನೆ ಪ್ರಕರಣದ ಹಿನ್ನೆಲೆ ಕ್ರಮ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧಿಕಾರಿಗಳ ವಂಚನೆಯಿಂದಾಗಿ ರಾಜ್ಯ ಸರ್ಕಾರಕ್ಕೆ 13 ಕೋಟಿ ರು. ನಷ್ಟ ಉಂಟಾಗಿತ್ತು. ಇನ್ನು 2013ರಲ್ಲಿ ಅಂದಿನ ಎಸ್‌ಬಿಎಂ ಬ್ಯಾಂಕ್‌ನಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ನಡೆದ ಹಣ ವರ್ಗಾವಣೆಯಿಂದ ಸರ್ಕಾರಕ್ಕೆ 10 ಕೋಟಿ ರು. ಪಾವತಿಯಾಗಿರಲಿಲ್ಲ. ಈ ಬಗ್ಗೆ ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯೂ ಕ್ರಮಕ್ಕೆ ಶಿಫಾರಸು ಮಾಡಿದ್ದು, ಈ ಬಗ್ಗೆ ಕಳೆದ ನಾಲ್ಕು ವರ್ಷದಿಂದ ಸರ್ಕಾರ ಪತ್ರ ವ್ಯವಹಾರ ಹಾಗೂ ಸಭೆ ನಡೆಸಿದ್ದರೂ ಬ್ಯಾಂಕ್‌ಗಳು ಸ್ಪಂದಿಸಿಲ್ಲ. ಹೀಗಾಗಿ ಎರಡೂ ಬ್ಯಾಂಕ್‌ಗಳ ಜತೆ ಯಾವುದೇ ವ್ಯವಹಾರ ನಡೆಸದಿರಲು ರಾಜ್ಯ ಸರ್ಕಾರ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.
ಏನಿದು ವಂಚನೆ ಪ್ರಕರಣ? : ಮೊದಲನೆಯದಾಗಿ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ರಾಜಾಜಿನಗರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಒಂದು ವರ್ಷದ ನಿಶ್ಚಿತ ಠೇವಣಿ ಇಡಲು 2011ರ ಸೆ.14 ರಂದು 25 ಕೋಟಿ ರು.ಗಳನ್ನು ಚೆಕ್ ಮೂಲಕ ಪಾವತಿಸಿತ್ತು. ಇದಕ್ಕೆ ಸೇಲಂ ಶಾಖೆಯಿಂದ 12 ಕೋಟಿ ರು. ಹಾಗೂ 13 ಕೋಟಿ ರು.ಗಳ ನಿಶ್ಚಿತ ಠೇವಣಿ ರಸೀದಿ ನೀಡಲಾಗಿತ್ತು.
ಆದರೆ, ಬ್ಯಾಂಕ್ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಿಂದ ಎರಡನೇ ಠೇವಣಿಯ ಹಣ ಈವರೆಗೆ ಸರ್ಕಾರಕ್ಕೆ ಪಾವತಿಯಾಗಿಲ್ಲ. ಈ ಬಗ್ಗೆ ಹಲವು ಬಾರಿ ಸಭೆ, ಪತ್ರ ವ್ಯವಹಾರ ನಡೆಸಿದರೂ ಬ್ಯಾಂಕ್ ಸ್ಪಂದಿಸಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ 10 ವರ್ಷಗಳಿಂದ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಎರಡನೇ ಪ್ರಕರಣದಲ್ಲಿ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಅವೆನ್ಯೂ ರಸ್ತೆ ಶಾಖೆಯಲ್ಲಿ 2013ರ ಆಗಸ್ಟ್‌ನಲ್ಲಿ 10 ಕೋಟಿ ರು.ಗಳ ನಿಶ್ಚಿತ ಠೇವಣಿ ಹೂಡಿದ್ದರು.
ಅವಧಿ ಮುಕ್ತಾಯವಾಗುವುದಕ್ಕಿಂತ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಠೇವಣಿಗೆ ಸಂಬಂದಪಟ್ಟ ಹಣವನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಒಂದು ಖಾಸಗಿ ಕಂಪೆನಿಯ ಸಾಲಕ್ಕೆ ಹೊಂದಾಣಿಕೆ ಮಾಡಿದ್ದರು. ಈ ಬಗ್ಗೆ ಎಷ್ಟೇ ಪ್ರಯತ್ನಿಸಿದರೂ ಬ್ಯಾಂಕ್ ಸರ್ಕಾರಕ್ಕೆ ಹಣ ನೀಡಿಲ್ಲ.
ಮುಂದೆ ಯಾವ ಬ್ಯಾಂಕ್ ಜತೆ ವ್ಯವಹಾರ? : ಮುಂದೆ ಯಾವ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗುತ್ತದೆ ಎಂಬ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಡಾ.ಪಿ.ಸಿ. ಜಾಫರ್, ‘ಯಾವ ಬ್ಯಾಂಕ್ ನಮ್ಮ ಠೇವಣಿಗಳಿಗೆ ಹೆಚ್ಚು ಬಡ್ಡಿ ನೀಡುತ್ತದೆ ಎಂಬ ಬಗ್ಗೆ ಟೆಂಡರ್ ಕರೆಯಲಾಗುವುದು. ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗುವುದು. ಈ ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ’ ಎಂದು ಡಾ.ಪಿ.ಸಿ. ಜಾಫರ್ ಸ್ಪಷ್ಟಪಡಿಸಿದರು.
ಇನ್ನು ಸರ್ಕಾರದ ವೇತನಗಳನ್ನು ಆರ್‌ಬಿಐ ಖಾತೆಯಿಂದ ನಿರ್ವಹಿಸಲಾಗುತ್ತದೆ. ಹೀಗಾಗಿ ಸರ್ಕಾರಿ ಉದ್ಯೋಗಿಗಳು ವೈಯಕ್ತಿಕವಾಗಿ ಈ ಬ್ಯಾಂಕ್‌ಗಳ ಖಾತೆ ಹೊಂದುವಂತಿಲ್ಲ ಎಂದು ನಿಷೇಧಿಸಿಲ್ಲ. ಹೀಗಾಗಿ ವೇತನ ವ್ಯವಹಾರ ಸೇರಿದಂತೆ ಯಾವುದೇ ಸರ್ಕಾರಿ ಹಣಕಾಸು ವ್ಯವಹಾರಗಳಿಗೂ ತೊಂದರೆಯಾಗುವುದಿಲ್ಲ. ಒಂದು ರಾಜ್ಯ ಸರ್ಕಾರ ನಿಷೇಧಿಸಿದೆ ಎಂದರೆ ಆ ಬ್ಯಾಂಕ್‌ಗಳ ಹೆಸರಿಗೆ ಧಕ್ಕೆಯಷ್ಟೇ ಎಂದರು.
ಈ ಕ್ರಮದಿಂದ ರಾಜ್ಯ ಸರ್ಕಾರ, ಸರ್ಕಾರದ ಬ್ಯಾಂಕ್ ವ್ಯವಹಾರ ಹಾಗೂ ಸಿಬ್ಬಂದಿಗಳ ವೇತನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನಿಸಿದರೂ ಬ್ಯಾಂಕ್‌ಗಳು ನಮ್ಮ ಹಣ ವಾಪಸು ನೀಡಿಲ್ಲ. ಬ್ಯಾಂಕ್ ಎದುರು ರಾಜ್ಯ ಸರ್ಕಾರ ಅಸಹಾಯಕ ಎಂಬಂತಾಗಬಾರದು. ಹೀಗಾಗಿ ಲೆಕ್ಕಪತ್ರ ಸಮಿತಿಯ ಶಿಫಾರಸಿನಂತೆ ಕ್ರಮ ಕೈಗೊಂಡಿದ್ದೇವೆ.
- ಡಾ.ಪಿ.ಸಿ. ಜಾಫರ್, ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ