ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

| Published : Aug 16 2024, 12:53 AM IST / Updated: Aug 16 2024, 01:38 PM IST

dk shivakumar
ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು 150 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಬಡವರಿಗೆ 5 ಸಾವಿರ ನಿವೇಶನ ಹಾಗೂ ವಸತಿ ಯೋಜನೆಯಲ್ಲಿ 5 ಸಾವಿರ ಮನೆ ನಿರ್ಮಿಸಲಾಗುವುದು.

 ಚನ್ನಪಟ್ಟಣ :  ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು 150  ಕೋಟಿ ರು.ಗಳ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಬಡವರಿಗೆ 5 ಸಾವಿರ ನಿವೇಶನ ಹಾಗೂ ವಸತಿ ಯೋಜನೆಯಲ್ಲಿ 5 ಸಾವಿರ ಮನೆ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಚನ್ನಪಟ್ಟಣ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುರುವಾರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 78 ನೇ ಸ್ವಾತಂತ್ಯ್ರ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ನಂತರ ಸಂದೇಶ ನೀಡಿದರು.

ಮುಖ್ಯಮಂತ್ರಿಗಳು ಬುಧವಾರವಷ್ಟೇ ತಾಲೂಕು ಪಂಚಾಯತಿ ಮಟ್ಟದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ 150 ಕೋಟಿ ರು.ಗಳನ್ನು ವಿಶೇಷವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಈ ಅನುದಾನದಲ್ಲಿ ಆಗಬೇಕಾದ ಕಾಮಗಾರಿಗಳನ್ನು ರೂಪಿಸುವಂತೆಯೂ ಅವರು ಸೂಚಿಸಿದ್ದಾರೆ. ಈ ಮೂಲಕ ಚನ್ನಪಟ್ಟಣ ತಾಲೂಕಿನಲ್ಲಿ ಹೊಸ ಬದಲಾವಣೆ ತರಲು ಯತ್ನಿಸಲಾಗುತ್ತಿದೆ ಎಂದರು.

ಜನಸ್ಪಂದನಾ ಕಾರ್ಯಕ್ರಮದಲ್ಲಿ 22  ಸಾವಿರ ಅರ್ಜಿ:ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 22 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅವುಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಜನರು ಬಯಸಿರುವುದು ತಿಳಿದುಬಂದಿದೆ. ಗರಕ್ಕಳಿ ಏತನೀರಾವರಿ ಯೋಜನೆಯ ಪುನಃಶ್ಚೇತನ ಕೈಗೊಳ್ಳಲಾಗುತ್ತಿದೆ, ತಾಲೂಕಿನಾದ್ಯಂತ ಚೆಕ್ ಡ್ಯಾಂಗಳು, ಸೇತುವೆಗಳನ್ನು ೧೦೫ ಸ್ಥಳಗಳಲ್ಲಿ ನಿರ್ಮಿಸಲು 115 ಕೋಟಿ ರು. ಮಂಜೂರಾಗಿದೆ. ಸತ್ತೇಗಾಲದಿಂದ ಇಗ್ಗಲೂರು ಮೂಲಕ ರಾಮನಗರ- ಚನ್ನಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಜಲಸಂಪನ್ಮೂಲ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ ಎಂದರು.

೫ ಸಾವಿರ ಮನೆ ನಿರ್ಮಾಣ: ಅರಣ್ಯ ಸಂಬಂಧಿತ ಸಮಸ್ಯೆಗಳು ಹಾಗೂ ಕಾಡುಪ್ರಾಣಿಗಳ ಉಪಟಳದ ರಕ್ಷಣೆಯ ಕಾರ್ಯಕ್ರಮಗಳಿಗೆ 65 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಆಶ್ರಯ ಮನೆ ಯೋಜನೆಯಡಿ ನಿವೇಶನಕ್ಕಾಗಿ 7 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ, ನಿವೇಶನ ನೀಡಲು ಈಗಾಗಲೇ 117  ಎಕರೆ ಪ್ರದೇಶವನ್ನು ಗುರುತಿಸಲಾಗಿದೆ, ಈ ಕಾರ್ಯಕ್ಕಾಗಿ ತಾಲೂಕಿನಲ್ಲಿ ಜಮೀನು ನೀಡಲು ಆಸಕ್ತಿ ಇರುವವರಿದ್ದರೆ ಅವರಿಂದ ಮಾರುಕಟ್ಟೆ ದರದಲ್ಲಿ ಸರ್ಕಾರ ಜಮೀನು ಖರೀದಿಸಲಿದೆ, ಒಟ್ಟಾರೆ ೫ ಸಾವಿರ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಇದಲ್ಲದೇ ವಸತಿ ರಹಿತರಿಗೆ 5  ಸಾವಿರ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗ, ವೀರಶೈವ ಸಮುದಾಯ ಸೇರಿ ವಿವಿಧ ಅಭಿವೃದ್ಧಿ ನಿಗಮಗಳ ಹಲವು ಯೋಜನೆಗಳಡಿ ಬಡವರ ಕಲ್ಯಾಣಕ್ಕೆ ನೆರವು, ಸಾಲಸೌಲಭ್ಯ, ಸಹಾಯಧನದ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜನರಿಗೆ ಒಳ್ಳೆಯದು ಮಾಡುವುದೇ ಸ್ವಾತಂತ್ರ್ಯ: ಸ್ವಾತಂತ್ರ ಎಂದರೆ ಇಷ್ಟವಾದುದನ್ನು ಮಾಡುವುದು ಅಲ್ಲ, ಸ್ವಾತಂತ್ರ ಎಂದರೆ ಜನರಿಗೆ ಒಳ್ಳೆಯದನ್ನು ಮಾಡುವುದು. ಸ್ವಾತಂತ್ರ ದಿನ ಎಂದರೆ ಇತಿಹಾಸವನ್ನು ಹೇಳುವಂಥ ದಿನ, ನಾವು ಹೇಗೆ ಇದನ್ನು ಅವಲೋಕನ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಧ್ವಜ ಹಾರಿಸಿ ರಾಷ್ಟ್ರಗೀತೆಯನ್ನು ಹಾಡಿದರೆ ಸಾಲದು, ಅದರ ಮಹತ್ವವನ್ನು ಹೊಸ ಜನಾಂಗಕ್ಕೆ ತಿಳಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸ್ವಾತಂತ್ರ್ಯಕ್ಕೆ ಹಲವರ ಕೊಡುಗೆ: ದೇಶದ ಸ್ವಾತಂತ್ರ್ಯಕ್ಕೆ ಹಲವಾರು ಮಹನೀಯರು ಕೊಡುಗೆ ನೀಡಿದ್ದಾರೆ. ಬಾಲಗಂಗಾಧರ ತಿಲಕ, ಗೋಪಾಲಕೃಷ್ಣ ಗೋಖಲೆ, ಲಾಲಾ ಲಜಪತ್‌ರಾಯ್, ಬಿಪಿನ್ ಚಂದ್ರಪಾಲ್, ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಸುಭಾಷ್ ಚಂದ್ರ ಬೋಸ್, ಜವಾಹರಲಾಲ ನೆಹರು, ವಲ್ಲಭ ಭಾಯ್ ಪಟೇಲ್ ಮುಂತಾದ ಹಲವು ನಾಯಕರು ಮುಂಚೂಣಿಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿತು.

ವೀರರಾಣಿ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಸೇರಿ ಇನ್ನೂ ಹಲವಾರು ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಡಿ ವೀರ ಮರಣ ಹೊಂದಿದರು. ರಾಮನಗರ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಮರಣೀಯ ಕಾಣಿಕೆ ನೀಡಿದೆ. ಚನ್ನಪಟ್ಟಣಕ್ಕೆ ೨ ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಅಂದು ಸ್ಫೂರ್ತಿ ತುಂಬಿದ್ದರು. ಅದರಿಂದ ಪ್ರೇರಿತರಾದ ಆಲಹಳ್ಳಿ ಗ್ರಾಮದ ಪುಟ್ಟಸ್ವಾಮಿ, ಕನಕಪುರದ ಲಿಂಗಯ್ಯ, ಕಲ್ಲಹಳ್ಳಿಯ ಕರಿಯಪ್ಪ, ಗಾಂಧಿ ಕೃಷ್ಣಯ್ಯ, ಹುಣಸೇದೊಡ್ಡಿ ಬಾಳಪ್ಪ, ಅರೇಹಳ್ಳಿ ಎಂ.ಎಂ. ಸಿದ್ದೇಗೌಡ ಸೇರಿದಂತೆ ನೂರಾರು ಮಂದಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ನಾವು ನಮ್ಮ ಜಿಲ್ಲೆಯ ಜನರನ್ನು ಸ್ಮರಿಸಬೇಕು ಎಂದರು.

ಗ್ಯಾರಂಟಿ ನೀಡಿದ ಸರ್ಕಾರ: ನಮ್ಮ ಸರ್ಕಾರವು ಕಳೆದ ವರ್ಷ ಅಧಿಕಾರದ ಚುಕ್ಕಾಣಿ ಹಿಡಿದ ಕೆಲವೇ ದಿನಗಳಲ್ಲಿ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ನಾಡಿನ ಜನರ ಆಶೋತ್ತರಗಳನ್ನು ಆಧರಿಸಿವೆ. ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ಮೆಚ್ಚುಗೆಯ ನೋಟ ಬೀರಿದೆ ಎಂದು ಹೇಳಿದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಕನ್ನಡಪ್ರಭ ವರದಿಗಾರ ವಿನ್ಸೆಂಟ್ ವಿಜಯ್ ಸೇರಿ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಧಾನ ಪರಿಷತ್ ಶಾಸಕ ಸಿ.ಪಿ. ಯೋಗೇಶ್ವರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಚನ್ನಪಟ್ಟಣ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಂಗನಾಥ್, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಮುಖಂಡರಾದ ವಿಶ್ವನಾಥ್, ಗಂಗಾಧರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಚನ್ನಪಟ್ಟಣ ತಹಶೀಲ್ದಾರ್ ನರಸಿಂಹ ಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗಣ್ಯರು ವೇದಿಕೆಯಲ್ಲಿದ್ದರು.