ಬೀದರ್‌ ಮಹಾನಗರ ಪಾಲಿಕೆ ಪ್ರಸ್ತಾಪಕ್ಕೆ ಸರ್ಕಾರದ ಅಂತಿಮ ಮೊಹರು

| Published : Jan 31 2025, 12:50 AM IST

ಬೀದರ್‌ ಮಹಾನಗರ ಪಾಲಿಕೆ ಪ್ರಸ್ತಾಪಕ್ಕೆ ಸರ್ಕಾರದ ಅಂತಿಮ ಮೊಹರು
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮತ್ತು ಹಲವು ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ, ಸಂಪುಟ ಸಭೆಗಳಲ್ಲಿ ಚರ್ಚೆಗೆ ಬಂದು ಘೋಷಣೆಯಾಗಿತ್ತಾದರೆ ನಗರಸಭೆ ವ್ಯಾಪ್ತಿಗೆ 16 ಗ್ರಾಮಗಳನ್ನು ಸೇರಿಸಿ ಮಹಾನಗರ ಪಾಲಿಕೆಯನ್ನಾಗಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಅಪ್ಪಾರಾವ್‌ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲಾ ಕೇಂದ್ರ ಬೀದರ್‌ನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವ ಪ್ರಸ್ತಾಪಕ್ಕೆ ಸರ್ಕಾರದ ಅಂತಿಮ ಮೊಹರು ಬಿದ್ದಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 16 ಗ್ರಾಮಗಳನ್ನು ನಗರಕ್ಕೆ ಸೇರ್ಪಡೆಗೊಳಿಸಿ ಮೇಲ್ದರ್ಜೆಗೇರಿಸುವ ನಿರ್ಧಾರಕ್ಕೆ ಬರಲಾಗಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮತ್ತು ಹಲವು ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ, ಸಂಪುಟ ಸಭೆಗಳಲ್ಲಿ ಚರ್ಚೆಗೆ ಬಂದು ಘೋಷಣೆಯಾಗಿತ್ತಾದರೆ ನಗರಸಭೆ ವ್ಯಾಪ್ತಿಗೆ 16 ಗ್ರಾಮಗಳನ್ನು ಸೇರಿಸಿ ಮಹಾನಗರ ಪಾಲಿಕೆಯನ್ನಾಗಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಜಿಲ್ಲೆಯವರೇಯಾದ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರಿಗೆ ಈ ನಿರ್ಧಾರ ಮಹತ್ವದ್ದಾಗಿದ್ದು ತವರೂರಿನಲ್ಲಿ ಅಭಿವೃದ್ಧಿಯ ಹೇಳಿಕೆಗಳಲ್ಲಿ ಇದೊಂದು ಗರಿ ಇದ್ದಂತಾಗಿದೆ. ಹಾಗೆಯೇ ಜಿಲ್ಲಾ ಉಸ್ತು ವಾರಿ ಸಚಿವರಾದ ಈಶ್ವರ ಖಂಡ್ರೆ ಅವರೂ ಈ ಕುರಿತಂತೆ ಹಲವು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು ಈಗ ಫಲ ನೀಡಿದಂತಾಗಿದೆ.

ಮಹಾನಗರ ಪಾಲಿಕೆಯಾಗಲು ಇರುವ ಮಾನದಂಡಗಳಲ್ಲಿ ಪ್ರಮುಖವಾದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು ಬೀದರ್‌ ನಗರ ಸಭೆ ವ್ಯಾಪ್ತಿಯಲ್ಲಿ 2024ಕ್ಕೆ 2,79,277 ಜನಸಂಖ್ಯೆಯ ಪ್ರಮಾಣವನ್ನು ನಿರೀಕ್ಷಿಸಿದ್ದು ಅದರಂತೆ ಇನ್ನುಳಿದ ಅಷ್ಟೂರ್‌, ಅಮಲಾಪೂರ್‌, ಅಲಿಯಾಬಾದ್‌, ಗಾದಗಿ, ಕೋಲಾರ್‌ (ಕೆ) ಹಾಗೂ ಮರಖಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ 16 ಗ್ರಾಮಗಳ 32,393 ಜನಸಂಖ್ಯೆಯನ್ನು ಅಂಕಿ ಅಂಶಗಳನ್ನು ನೀಡಿ ಸರ್ಕಾರಕ್ಕೆ ಪೌರಾಡಳಿತ ಇಲಾಖೆಯು ಬೀದರ್‌ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿತ್ತು.ಮರು ಪ್ರಸ್ತಾವನೆ ಸಲ್ಲಿಕೆ

ಇದಕ್ಕೂ ಮೊದಲು ಜಿಲ್ಲಾಡಳಿತ 9 ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ತರುವ ಪ್ರಸ್ತಾವನೆ ಕಳಿಸಿತ್ತಾದರೆ ಕನಿಷ್ಟ 3 ಲಕ್ಷ ಜಜನಸಂಖ್ಯೆಯ ನಿಯಮಕ್ಕೆ ಕೊಂಚ ದೂರ ಇರುವ ಹಿನ್ನೆಲೆಯಲ್ಲಿ ಮತ್ತೇ 7 ಗ್ರಾಮಗಳೊಂದಿಗೆ ಒಟ್ಟು 16 ಗ್ರಾಮಗಳನ್ನು ಹೊಸದಾಗಿ ಸೇರಿಸಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಯಾವ ಯಾವ ಗ್ರಾಮಗಳ ಸೇರ್ಪಡೆ ?

ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಸದರಿ 6 ಗ್ರಾಮ ಪಂಚಾಯತ್‌ಗಳ 16 ಗ್ರಾಮಗಳನ್ನು ನೂತನವಾಗಿ ಸ್ಥಾಪಿತವಾಗಲಿರುವ ಬೀದರ್‌ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಬರಲಾಗಿರುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಒಪ್ಪಿಗೆಯನ್ನು ನೀಡಿದ್ದು, ಇನ್ನೇನು ಸರ್ಕಾರದಿಂದ ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಧಿಸೂಚನೆ ಹೊರ ಬೀಳಬೇಕಷ್ಟೆ.

ಬೀದರ್‌ ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಅಷ್ಟೂರ್‌ ಗ್ರಾಮ ಪಂಚಾಯತ್‌ನ ಓಡವಾಡಾ ಹಾಗೂ ತಾಜಲಾಪೂರ ಅಮಲಾಪೂರ ಗ್ರಾಪಂನ ಅಮಲಾಪೂರ ಹಾಗೂ ಗೋರನಳ್ಳಿ (ಬಿ), ಅಲಿಯಾಬಾದ್‌ ಗ್ರಾಪಂನ ಅಲಿಯಾಬಾದ್‌, ಚೋಂಡಿ ಹಾಗೂ ಚೌಳಿ ಗ್ರಾಮಗಳು, ಗಾದಗಿ ಗ್ರಾಪಂನ ಶಾಮರಾಜಪೂರ, ಸಿಪ್ಪಲಗೇರಾ, ಮಾಮನಕೇರಿ ಹಾಗೂ ಕಬೀರವಾಡಾ, ಕೋಳಾರ (ಕೆ) ಗ್ರಾಪಂನ ಕೋಳಾರ (ಕೆ), ನಿಜಾಮಪೂರ್‌, ಹಿಜ್ಜರಗಿ ಹಾಗೂ ಕಮಾಲಪೂರ ಗ್ರಾಮಗಳು ಅಲ್ಲದೆ ಮರಖಲ್‌ ಗ್ರಾಪಂನ ಚಿಕಪೇಟ್‌ ಗ್ರಾಮಗಳನ್ನು ನೂತನವಾಗಿ ಸ್ಥಾಪಿತವಾಗಲಿರುವ ಬೀದರ್‌ ಮಹಾನಗರ ಪಾಲಿಕೆಗೆ ಸೇರಿಸಲಾಗುತ್ತಿದೆ.

ಗ್ರಾಪಂ ಸದಸ್ಯರಿಂದ ಪಾಲಿಕೆ ಕಾರ್ಪೋರೇಟರ್‌ ಸ್ಥಾನದವರೆಗೆ

ಗ್ರಾಮಗಳು ಮುಂದೆ ಪಾಲಿಕೆಯ ವ್ಯಾಪ್ತಿಗೆ ಬಂದಾಗ ಈಗಿರುವ ನಗರಸಭೆಯ ಸದಸ್ಯರ ಅವಧಿ ಮುಗಿದ ನಂತರ ನಡೆಯುವ ಚುನಾವಣೆಯಲ್ಲಿ ಪಾಲಿಕೆಯ ಕಾರ್ಪೋರೇಟರ್‌ಗಳ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿಯೂ ಸದಸ್ಯತ್ವದ ಸ್ಥಾನ ಸಿಕ್ಕಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಗೆ ನಿಂತು ಪಂಚಾಯತ್‌ ಅಧ್ಯಕ್ಷರೋ, ಉಪಾಧ್ಯಕ್ಷರೋ ಅಥವಾ ಸದಸ್ಯರೋ ಆಗುತ್ತಿದ್ದವರು ಕಾರ್ಪೋರೇಟರ್‌ ಆಗಲೂಬಹುದು. ಗ್ರಾಮಗಳ ಅಭಿವೃದ್ಧಿಗೆ ನಗರ ಪ್ರದೇಶದಂತೆ ಅನುದಾನ ತರುವ ಸಾಧ್ಯತೆಗಳು ಹೇರಳ.

ಇನ್ನು, ಬೀದರ್‌ನ ಬಹುದಿನಗಳ ಕನಸು ಈಡೇರಿದಂತಾಗಿದೆ. ಮಹಾನಗರ ಪಾಲಿಕೆಯ ಮೂಲಕ ಬೀದರ್‌ ನಗರದ ಅಭಿವೃದ್ಧಿ ಹಾಗೂ ಪಾಲಿಕೆ ವ್ಯಾಪ್ತಿಗೆ ಬಂದಿರುವ ಗ್ರಾಮೀಣ ಪ್ರದೇಶಗಳ ಬೆಳವಣಿಗೆಗೂ ಅವಕಾಶ ಸಿಕ್ಕಂತಾಗುತ್ತದೆ. ಒಂದು ವಾರದಲ್ಲಿ ಸರ್ಕಾರದ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸೇರಿದಂತೆ ಎಲ್ಲ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೀದರ್‌ ಮಹಾನಗರ ಪಾಲಿಕೆ ಸ್ಥಾಪಿತವಾಗುತ್ತಿದ್ದಂತೆ ಸರ್ಕಾರದಿಂದ ಪ್ರತಿ ಪಾಲಿಕೆಗೆ 100 ಕೋಟಿ ರು.ಗಳ ಅನುದಾನ ನಿಗದಿಯಿದೆ. ಹೀಗಾಗಿ ಅಲ್ಲಿಯೂ ಅದರಿಂದ ಅಭಿವೃದ್ಧಿ ಕಾರ್ಯಗಳು ಇನ್ನೂ ಹೆಚ್ಚಲಿವೆ. ಪಾಲಿಕೆ ವ್ಯಾಪ್ತಿಗೆ ಈ 16 ಗ್ರಾಮಗಳು ಬರುವ ಕುರಿತು ನಾಲ್ಕೈದು ದಿನಗಳಲ್ಲಿ ಸರ್ಕಾರದ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿ ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪೌರಾಡಳಿತ ಸಚಿವ ರಹೀಮ್‌ ಖಾನ್‌ ಹೇಳಿದರು.