ಸಾರಾಂಶ
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುಪರಭಾರೆಗೊಂಡ ಸಾಗುಬಾಣೆ ಜಮೀನು ಅಥವಾ ಅದರಲ್ಲಿನ ಮರಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಸಾಗುಬಾಣೆ ಜಮೀನವೊಂದರಲ್ಲಿ ಮರಗಳನ್ನು ಕತ್ತರಿಸಲು ಠೇವಣಿ ಇಡಲಾಗಿದ್ದ 4.33 ಲಕ್ಷ ಹಣವನ್ನು ಭೂ ಮಾಲೀಕರಿಗೆ ಹಿಂದಿರುಗಿಸಲು 33 ವರ್ಷಗಳಿಂದ ಸತಾಯಿಸುತ್ತಿದ್ದ ರಾಜ್ಯ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.
ತಾವು ಖರೀದಿಸಿದ ಪರಭಾರೆಗೊಂಡ ಸಾಗುಬಾಣೆ ಜಮೀನಿನಲ್ಲಿ 349 ಮರಗಳನ್ನು ಕತ್ತರಿಸಿ ತೆರವುಗೊಳಿಸಲು ಠೇವಣಿ ಇಡಲಾಗಿದ್ದ 4.33 ಲಕ್ಷ ರು. ಹಿಂದಿರುಗಿಸಲು ನಿರಾಕರಿಸಿದ್ದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಕ್ರಮ ಪ್ರಶ್ನಿಸಿ ಮಡಿಕೇರಿ ತಾಲೂಕಿನ ಬಿಳಿಗೆರೆ ಗ್ರಾಮದ ನಿವಾಸಿ ಗಾಯತ್ರಿ (65) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರು ಈ ಆದೇಶ ಮಾಡಿ,, 4.33 ಲಕ್ಷ ಹಣವನ್ನು ಅರ್ಜಿದಾರರು ಠೇವಣಿಯಿಟ್ಟ ದಿನದಿಂದ ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ಹಿಂದಿರುಗಿಸುವಂತೆ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ತಾಕೀತು ಮಾಡಿದೆ.ಪ್ರಕರಣದ ವಿವರ:
ಕೊಡಗು ಜಿಲ್ಲೆಯ ಮಡಿಕೇರಿಯ ತಾಲೂಕಿನ ಬಿಳಿಗೇರಿ ಗ್ರಾಮದ ಸರ್ವೇ 23ರಲ್ಲಿನ 25 ಎಕರೆ ಮತ್ತು ಸರ್ವೇ ನಂ.29/7ರಲ್ಲಿನ 13.23 ಎಕರೆ ಜಮೀನನ್ನು ಅರ್ಜಿದಾರರ ಪತಿ ಎನ್.ಮಹಾಬಲೇಶ್ವರ ಭಟ್ ಖರೀದಿಸಿದ್ದರು. 1983ರಲ್ಲಿ ಈ ಜಮೀನಿನಲ್ಲಿರುವ 349 ಮರಗಳನ್ನು ಕತ್ತರಿಸಲು ಅನುಮತಿ ಕೋರಿ ಕೊಡಗು ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಅರ್ಜಿ ಸಲ್ಲಿ ಸಲ್ಲಿಸಿದ್ದರು. 1983ರ ಫೆ.1ರಂದು ಅನುಮತಿ ದೊರೆದಿತ್ತು. ಅರಣ್ಯಾಧಿಕಾರಿಗಳ ಷರತ್ತಿನಂತೆ ಮರಗಳನ್ನು ಕತ್ತರಿಸಿ, ತೆರವು ಕಾರ್ಯದ ಮೌಲ್ಯವಾದ 4,33,082.35 ರು. ಅರ್ಜಿದಾರರೇ ಠೇವಣಿ ಇಟ್ಟಿದ್ದರು.ಮರಗಳನ್ನು ಕತ್ತರಿಸಿ ತೆರವುಗೊಳಿಸಿದ ನಂತರ ಈ ಜಮೀನು ಪರಭಾರೆಗೊಂಡ ಸಾಗುಬಾಣೆ ಜಮೀನಾಗಿದ್ದು, ಅದನ್ನು ಭೂ ಕಂದಾಯಕ್ಕೆ ಒಳಪಡಿಸಲಾಗಿರುವ ವಿಷಯ ಮಹಾಬಲೇಶ್ವರ ಭಟ್ ಅರಿವಿಗೆ ಬಂದಿತ್ತು. ಇದರಿಂದ ಈ ಜಮೀನು ತಮಗೆ ಸೇರಿರುವುದರಿಂದ ಮರಗಳನ್ನು ಕತ್ತರಿಸಲು ಹಣ ಠೇವಣಿಯಿಡುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಷರತ್ತು ವಿಧಿಸಲು ಅವಕಾಶವಿಲ್ಲ, ಹಾಗಾಗಿ ಠೇವಣಿ ಹಿಂದಿರುಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು 2012ರ ಏ.4ರಂದು ವಜಾಗೊಳಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಈ ಜಮೀನು 1897ರಲ್ಲಿ ಪರಭಾರೆಗೊಂಡಿದ್ದು, ಅದನ್ನು ಭೂ ಕಂದಾಯ ಕಾಯ್ದೆ-1964ರ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ ಮತ್ತು ಠೇವಣಿಯನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಈ ಆದೇಶ ಪ್ರಶ್ನಿಸಿ 2013ರಲ್ಲಿ ಮಹಾಭಲೇಶ್ವರ ಭಟ್ ಪತ್ನಿ ಗಾಯತ್ರಿ (ಪತಿ ನಿಧನರಾದ ಹಿನ್ನೆಲೆಯಲ್ಲಿ) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.ಸರ್ಕಾರದ ಪರ ವಕೀಲರು ವಾದಿಸಿ, ಮರಗಳನ್ನು ಕತ್ತರಿಸಲು ಠೇವಣಿ ಪಾವತಿಸುವ ಷರತ್ತನ್ನು ಸ್ವತಃ ಅರ್ಜಿದಾರರೇ ಒಪ್ಪಿಕೊಂಡಿರುವ ಸನ್ನಿವೇಶದಲ್ಲಿ ಠೇವಣಿ ಹಿಂಪಾವತಿಗೆ ಕೋರಲಾಗದು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಈ ಭೂಮಿ ಸಾಗುಬಾಣೆಯೆಂದು ಸೂಚಿಸಿದ್ದಾರೆ ಹೊರತು ಪರಭಾರೆಗೊಂಡ ಸಾಗುಬಾಣೆ ಜಮೀನು ಎಂದು ಹೇಳಿರಲಿಲ್ಲ ಎಂದು ಪ್ರತಿವಾದಿಸಿದ್ದರು.
ಈ ವಾದ ಒಪ್ಪದ ಹೈಕೋರ್ಟ್, ಸಾಗು ಬಾಣೆ ಜಮೀನು ಒಮ್ಮೆ ಪರಭಾರೆಗೊಂಡರೆ, ಆ ಭೂಮಿ ಮೇಲಾಗಲಿ ಅಥವಾ ಅದರಲ್ಲಿನ ಮರದ ಮೇಲಿಗಾಗಲಿ ಸರ್ಕಾರ ಯಾವುದೇ ಹಕ್ಕು ಪ್ರತಿಪಾದಿಸಲಾಗದು. ಪ್ರಕರಣದಲ್ಲಿ 2010 ಮಾ.29ರಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ಪ್ರಕರಣದಲ್ಲಿ ವಿವಾದಿತ ಜಮೀನು ಪರಭಾರೆಗೊಂಡ ಸಾಗುಬಾಣೆ ಜಮೀನಾಗಿದ್ದು, ಕಂದಾಯಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅದರಂತೆ ಈ ಭೂಮಿ ಮೇಲಿನ ಸಂಪೂರ್ಣ ಹಕ್ಕು ಅರ್ಜಿದಾರರಿಗೆ ಸೇರಿರುತ್ತದೆ ಎಂದು ಹೇಳಿದೆ.ಅಂತಿಮವಾಗಿ ಈ ಜಮೀನು 1897ರಲ್ಲಿಯೇ ಪರಭಾರೆಗೊಂಡ ಸಾಗು ಬಾಣೆ ಜಮೀನು ಎಂಬುದಾಗಿ ತೋರಿಸಲಾಗಿದೆ. ಈ ವಿಚಾರವನ್ನು ಅರಣ್ಯ ಅಧಿಕಾರಿಗಳು ದಾಖಲೆಗಳಿಂದ ದೃಢಪಡಿಸಿಕೊಳ್ಳಬೇಕೇ ಹೊರತು ಅರ್ಜಿದಾರರ ಹೇಳಿಕೆಯಿಂದಲ್ಲ. ಮರಗಳನ್ನು ಕತ್ತರಿಸಲು ಅರ್ಜಿದಾರರು ಅನುಮತಿ ಕೋರಿದಾಗಲೇ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾದದ್ದು ಅರಣ್ಯಾಧಿಕಾರಿಗಳ ಕರ್ತವ್ಯ. ಅರ್ಜಿದಾರರ ತಪ್ಪಾಗಿ ಸಾಗುಬಾಣೆ ಜಮೀನೆಂದು ತೋರಿಸಿರುವುದರ ಅನುಕೂಲವನ್ನು ಸರ್ಕಾರ ಪಡೆಯಬಾರದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರಿಗೆ ಠೇವಣಿ ಹಿಂದಿರುಗಿಸಲು ಸೂಚಿಸಿದೆ.