ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ: ಬಾಲಕ ಸಾವು

| Published : Oct 29 2024, 12:55 AM IST

ಸಾರಾಂಶ

ಬಾಲಕ ಥಲಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.

ಹೊಸಪೇಟೆ: ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸೋಮವಾರ ಐದು ವರ್ಷದ ಮಗು ಮೃತಪಟ್ಟಿದೆ ಎಂದು ಮಕ್ಕಳ ಪೋಷಕರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಮಲಾಪುರದ ಅಂಬೇಡ್ಕರ್‌ ನಗರದ ನಿವಾಸಿ ಶಾಂತಪ್ಪ ಮತ್ತು ಶಂಕ್ರಮ್ಮ ದಂಪತಿ ಪುತ್ರ ಕುಶಾಲ್ (5) ಮೃತಪಟ್ಟ ಬಾಲಕ.

ಈ ಬಾಲಕ ಥಲಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಗೆ ಬಾಲಕನನ್ನು ಸೋಮವಾರ ಬೆಳಗ್ಗೆ ಕರೆದುಕೊಂಡು ಬಂದಾಗ ಜ್ವರ ಹೆಚ್ಚಿತ್ತು. ತುರ್ತು ಚಿಕಿತ್ಸೆಗೆ ವೈದ್ಯರು ಕೂಡ ಇರಲಿಲ್ಲ. ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ದೂರಿದರು. ಮಗುವನ್ನು ಕಳೆದುಕೊಂಡ ತಾಯಿ ಹಾಗೂ ಪೋಷಕರು ರೋದಿಸಿದರು.

ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅ.24ರಂದು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ಮತ್ತೆ ಜ್ವರ ಹೆಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ನೀಡಿದ ವೈದ್ಯ ಡಾ. ರಾಘವೇಂದ್ರ, ಕೊಪ್ಪಳದ ಜಿಲ್ಲಾಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಆದರೆ, ಆ್ಯಂಬುಲೆನ್ಸ್‌ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅವರು ಮತ್ತೆ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಅಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ಭಗತ್‌ಸಿಂಗ್‌ ರಕ್ತದಾನಿಗಳ ಸಂಘದ ಅಧ್ಯಕ್ಷ ಕೆ.ಎಂ. ಸಂತೋಷ್‌ ದೂರಿದರು.

ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದರೆ ಮಗು ಉಳಿಯುತ್ತಿತ್ತು. ಕನಿಷ್ಠ ಆ್ಯಂಬುಲೆನ್ಸ್ ಇಲ್ಲದಿದ್ದರೆ ಇದನ್ನು ಸರ್ಕಾರಿ ಆಸ್ಪತ್ರೆ ಎಂದು ಹೇಳಲು ಹೇಗೆ ಸಾಧ್ಯ? ಬೈಕ್‌ನಲ್ಲೇ ನಾವು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಮಗು ತೋರಿಸಿದ್ದೇವೆ. ಮೊದಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಎಂದು ಬಾಲಕನ ತಾತ ಹುಲುಗಪ್ಪ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಡಾವಣೆ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದರು.

ಬಾಲಕ ಕುಶಾಲ್‌ ಥಲಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿದ್ದ. ತಿಂಗಳಿಗೊಮ್ಮೆ ರಕ್ತ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡಿ, ಕೊಪ್ಪಳದ ಜಿಲ್ಲಾಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದ್ದರು ಎನ್ನುತ್ತಾರೆ ವಿಜಯನಗರ ಡಿಎಚ್‌ಒ ಡಾ. ಎಲ್‌.ಆರ್‌. ಶಂಕರ್‌ ನಾಯ್ಕ.

ಥಲಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಟ್ರ್ಯಾಕ್‌ ಮಾಡಬೇಕು. ಇನ್ನು ಸರಿಯಾಗಿ ಆ್ಯಂಬುಲೆನ್ಸ್‌ ವ್ಯವಸ್ಥೆ ಕೂಡ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ. ಈ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಸೂಕ್ತ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಭಗತ್‌ಸಿಂಗ್‌ ರಕ್ತದಾನಿಗಳ ಸಂಘದ ಅಧ್ಯಕ್ಷ ಕೆ.ಎಂ. ಸಂತೋಷ್‌.