ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೀಳರಿಮೆ ಸಲ್ಲದು: ಝೀವಲ್‌ ಖಾನ್

| Published : Mar 09 2024, 01:32 AM IST

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೀಳರಿಮೆ ಸಲ್ಲದು: ಝೀವಲ್‌ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗು ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಕೀಳರಿಮೆಯಿಂದ ಹೊರಬರಬೇಕು. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್‍ಖಾನ್ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗು ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸದೊಂದಿಗೆ ಉನ್ನತ ಶಿಕ್ಷಣ ಪಡೆದ ಶೇ.80ರಷ್ಟು ಮಂದಿ ಸರ್ಕಾರಿ ಕೆಲಸದಲ್ಲಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಮಕ್ಕಳ ಇಂತಹ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ಸಾಹಿತ್ಯ ಸಂಭ್ರಮದ ಉದ್ದೇಶ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡಬೇಕು ಹಾಗು ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯಬೇಕು. ಓದುವುದರ ಮೂಲಕ ಮಕ್ಕಳು ಜ್ಞಾನ ಸಂಪಾದಿಸಿಕೊಳ್ಳಬೇಕು. ಮಕ್ಕಳು ಸಾಮಾಜಿಕವಾಗಿ ಬೆಳೆಯಬೇಕು. ಹೊಸತನ ಬೆಳೆಯಬೇಕು ಎಂದು ಹೇಳಿದರು.

ಪ್ರತಿ ಮಕ್ಕಳಲ್ಲೂ ಪ್ರತಿಭೆಯಿದೆ. ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಡಬೇಕಾಗಿದೆ. ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳು ಹಲವಷ್ಟು ಕಲಿತ್ತಿದ್ದಾರೆ. ಉತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಸಂಪನ್ಮೂಲ ಹಾಗು ಸಹಸಂಪನ್ಮೂಲ ವ್ಯಕ್ತಿಗಳು ಶ್ರಮಪಟ್ಟಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ ಎಂದು ಹೇಳಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್ ಮಾತನಾಡಿ, ಗ್ರಾಮ ಪಂಚಾಯಿತಿ ಮಕ್ಕಳ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಕಲಿತ ಮಕ್ಕಳು ಮುಂದೊಂದು ದಿನ ಕವಿಗಳಾಗಿ, ಸಮಾಜಸೇವಕರಾಗಿ, ಕಲಾವಿದರಾಗಿ ಹೊರಹೊಮ್ಮಿ ಸಮಾಜ ಆಸ್ತಿಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ನೋಡೆಲ್ ಅಧಿಕಾರಿ ಝೀವಲ್‍ಖಾನ್ ಅವರ ಸಂದರ್ಶನವನ್ನು ದೀಪ್ತಿ ನಿರ್ವಹಿಸಿ ಗಮನ ಸೆಳೆದರು. ಮಕ್ಕಳು ತಾವೇ ರಚಿಸಿದ ಕವನ, ಕಥೆಗಳನ್ನು ವಾಚಿಸಿ, ತಪ್ಪಾಳೆ ಗಿಟ್ಟಿಸಿದರು.

ವೇದಿಕೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಅಹಮ್ಮದ್ ಆಗ್ರೆ, ಮಕ್ಕಳ ಸಂಭ್ರಮ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಸುಮನ ಮ್ಯಾಥ್ಯೂ, ಸಂಪನ್ಮೂಲ ವ್ಯಕ್ತಿಗಳಾದ ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಪೊನ್ನಪ್ಪ, ಹೇಮಂತ್ ಪಾರೇರ, ಸಹ ಸಂಪನ್ಮೂಲ ವ್ಯಕ್ತಿಗಳಾದ ಎಲ್.ಎಂ.ಪ್ರೇಮ ಇದ್ದರು.