ಸಾರಾಂಶ
ಶಿಕ್ಷಣ ಅಧಿಕಾರಿಗಳ ಸಭೆ । ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಲಿ
ಕನ್ನಡಪ್ರಭ ವಾರ್ತೆ ಔರಾದ್ಸರ್ಕಾರಿ ಶಾಲೆಗಳು ಅವ್ಯವಸ್ಥೆಯ ತಾಣಗಳಾಗಿವೆ. ಇವುಗಳನ್ನು ಸರಿಪಡಿಸಿ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇರುವಂತೆ ಮಾಡಬೇಕೆಂದು ಶಾಸಕ ಪ್ರಭು ಬಿ.ಚವ್ಹಾಣ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಘಮಸುಬಾಯಿ ಬೋಂತಿ ತಾಂಡಾದಲ್ಲಿನ ಶಾಸಕರ ಗೃಹ ಕಚೇರಿ ಆವರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಮಕ್ಕಳಿರುವ ಕಡೆ ಶಿಕ್ಷಕರಿಲ್ಲ, ಶಿಕ್ಷಕರಿರುವ ಕಡೆ ಮಕ್ಕಳಿಲ್ಲ, ಶಿಕ್ಷಕರು ಸಮಯಕ್ಕೆ ಶಾಲೆಗೆ ಹೋಗುವುದಿಲ್ಲ, 7-8ನೇ ತರಗತಿ ಮಕ್ಕಳಿಗೆ ಸರಿಯಾಗಿ ಓದಲು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಾನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಆದರೆ ಅಧಿಕಾರಿಗಳು ಮತ್ತು ಶಿಕ್ಷಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕಳೆದ ಎರಡು ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರ ಕುಸಿದಿರುವುದು ಬೇಸರ ಮೂಡಿಸಿದೆ. ಈ ವರ್ಷದ ಫಲಿತಾಂಶ ಸುಧಾರಣೆಗೆ ಏನು ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕೆಲವು ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಶಾಲೆಗೆ ಬರುವುದಿಲ್ಲವೆಂಬ ದೂರುಗಳಿವೆ. ತಾಂಡಾ ಶಾಲೆಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಿ.ಆರ್.ಪಿ, ಸಿ.ಆರ್.ಪಿ, ಇಸಿಒ ಇನ್ನಷ್ಟು ಚುರುಕಾಗಬೇಕು. ಶಿಕ್ಷಕರ ಮೇಲೆ ನಿಗಾ ವಹಿಸಬೇಕು. ಸರಿಯಾಗಿ ಕೆಲಸ ಮಾಡದವರಿಗೆ ಚುರುಕು ಮುಟ್ಟಿಸಬೇಕು. ತಾವು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ ಶಿಕ್ಷಕರನ್ನು ಸರಿದಾರಿಗೆ ತರಬೇಕು ಎಂದರು.ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವವರು. ಹಾಗಾಗಿ ಶಿಕ್ಷಕರೆಂದರೆ ನನಗೆ ಎಲ್ಲಿಲ್ಲದ ಗೌರವ ಭಾವನೆಯಿದೆ. ಇದಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡಬೇಕು. ಎಲ್ಲ ಶಾಲೆಗಳಿಗೆ ಉತ್ತಮ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಆಟದ ಮೈದಾನ, ಗ್ರಂಥಾಲಯ, ಎಲ್ಇಡಿ ಟಿವಿ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಮಾಡುವ ಕೆಲಸ ನಡೆದಿದೆ. ಇನ್ನೂ ಯಾವುದಾದರೂ ಶಾಲೆಗಳಲ್ಲಿ ಕೊರತೆ ಇದ್ದರೆ ನನ್ನ ಗಮನಕ್ಕೆ ತಂದು ಪಡೆದುಕೊಳ್ಳಿ. ಶಿಕ್ಷಣದ ಗುಣಮಟ್ಟ ಸುಧಾರಿಸುವುದೇ ನನ್ನ ಸಂಕಲ್ಪವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ ರಂಗೇಶ, ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ ರಾಠೋಡ್, ಶಿಕ್ಷಕರ ಸಂಘದ ಅಧ್ಯಕ್ಷ ಪಂಢರಿ ಆಡೆ, ಧೂಳಪ್ಪ, ವಿದ್ಯಾಸಾಗರ, ವಿಶ್ವನಾಥ ಬಿರಾದಾರ, ಬಸವರಾಜ ಪಾಟೀಲ್, ಸಿಆರ್ಪಿ ಬಿಆರ್ಪಿ, ಇಸಿಓ, ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿ ಇತರರು ಇದ್ದರು.