ಸಾರಾಂಶ
ಕನ್ನಡಪ್ರಭವಾರ್ತೆ ಹಾಸನ
ಕಲಾವಿದರ ಪ್ರಾಯೋಜನ ಕಾರ್ಯಕ್ರಮಗಳಿಗೆ ಈ ವರ್ಷದ ಅನುದಾನವನ್ನು ಸರ್ಕಾರ ನೀಡಿರುವುದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಚೆಲುವನಹಳ್ಳಿ ಶೇಖರಪ್ಪ ಮತ್ತು ಅಧ್ಯಕ್ಷ ರವಿಕುಮಾರ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಲಾವಿದರಿಗೆ ಮಾಸಾಶನ ಕೊಡುವುದಾಗಿ ಸರಕಾರ ಹೇಳಿದ್ದು, ಆದೇಶ ಬಂದಿರುವುದಿಲ್ಲ. ಹೇಳಿಕೆ ನೀಡಿರುವುದಕ್ಕೆ ನಾವು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ೨೦೨೪-೨೫ನೇ ಸಾಲಿನ ಕಲಾವಿದರಿಗೆ ಪ್ರಾಯೋಜನ ಕಾರ್ಯಕ್ರಮಗಳಿಗೆ ಸರಕಾರ ಇಲ್ಲಿವರೆಗೂ ಅನುಧಾನ ನೀಡಿರುವುದಿಲ್ಲ. ಕೆಲ ಕಲಾವಿದರು ವೃತಿ ಕಲಾವಿದರಿದ್ದು, ಅದರಿಂದಲೇ ಜೀವನ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಕೂಡಲೇ ಕಲಾವಿದರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ನವೆಂಬರ್ ೨೯ರಿಂದ ಡಿಸೆಂಬರ್ ೭ರವರೆಗೂ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಇವರ ವತಿಯಿಂದ ಮೊದಲನೇ ವರ್ಷದ ನಾಟಕೋತ್ಸವವನ್ನು ನವೆಂಬರ್ ೨೯ರಿಂದ ಡಿಸೆಂಬರ್ ೭ರವರೆಗೂ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ. ಒಂದು ನಾಟಕೋತ್ಸವ ಮಾಡಬೇಕಾದರೇ ಎರಡುವರೆ ಲಕ್ಷ ಖರ್ಚು ಆಗುತ್ತದೆ. ಈ ಖರ್ಚು ವೆಚ್ಚ ಭರಿಸುವ ನಿಟ್ಟಿನಲ್ಲಿ ಒಂದು ತಂಡಕ್ಕೆ ೭೫ ಸಾವಿರ ನಿಗದಿ ಮಾಡಲಾಗಿದೆ. ಇದರಲ್ಲಿ ಕಲಾಭವನದ ಬಾಡಿಗೆ, ಸೀನರಿ, ವಾದ್ಯ ಬಾರಿಸುವವರು ಎಲ್ಲಾ ಸೇರಿ ಖರ್ಚು ಭರಿಸಲು ನಮ್ಮ ಸಮಿತಿಯಿಂದಲೂ ನಮ್ಮ ಕೈಯಿಂದ ಕೂಡ ಸಹಾಯ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಪ್ರೇಕ್ಷಕರು ಬಂದು ನಾಟಕ ವೀಕ್ಷಣೆ ಮಾಡುವುದು ಕಡಿಮೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಲ್ಲಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಚಿತ ನಾಟಕ ಪ್ರದರ್ಶನವನ್ನು ವೀಕ್ಷಣೆ ಮಾಡಿ ಪ್ರೋತ್ಸಹ ನೀಡುವಂತೆ ಮನವಿ ಮಾಡಿದರು. ೨೦೨೪ ನವೆಂಬರ್ ೨೯ ರಂದು ಶುಕ್ರವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊದಲ ದಿವಸ ಜೈಮಾರುತಿ ಕಲಾ ಸಂಘದಿಂದ "ರತ್ನ ಮಾಂಗಲ್ಯ " ಸಾಮಾಜಿಕ ನಾಟಕ ನಡೆಯಲಿದೆ. ಎರಡನೇ ದಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಕಲಾ ತಂಡದಿಂದ ಕುರುಕ್ಷೇತ್ರ ನಾಟಕ, ಮೂರನೇ ದಿನದಂದು ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದಿಂದ ದಕ್ಷಯಜ್ಞ, ನಾಲ್ಕನೇ ದಿವಸದಂದು ದೇವಿಗೆರೆ ಶ್ರೀ ಆಚಿಜನೇಯಸ್ವಾಮಿ ಹಿರಿಯ ಮಿತ್ರಕೂಟದಿಂದ ಧರ್ಮರಾಜ್ಯ ಪೌರಾಣಿಕ ನಾಟಕ, ಐದನೇ ದಿನ ಶ್ರೀ ಚಾಮುಂಡೇಶ್ವರಿ ಕಲಾಸಂಘದಿಂದ ಸಂಪೂರ್ಣರಾಮಾಯಣ ನಾಟಕ, ಆರನೇ ದಿವಸದಂದು ಶ್ರೀರಾಮಾಂಜನೇಯ ಕಲಾಸಂಘದಿಂದ ಕುರುಕ್ಷೇತ್ರ ಪೌರಾಣಿಕ ನಾಟಕ, ಏಳನೇ ದಿನದಂದು ಹಾಸನಾಂಬ ಕಲಾ ಸಂಘದಿಂದ ಸಂಪೂರ್ಣ ರಾಮಾಯಣ ನಾಟಕ, ಎಂಟನೇ ದಿನದಂದು ದೇವಮ್ಮ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಸಂಪೂರ್ಣ ರಾಮಾಯಣ ಹಾಗೂ ಒಂಭತ್ತನೆ ದಿನದಂದು ಕೊನೆಯ ದಿವಸ ಶ್ರೀ ತಿರುಪತಿ ಕಲಾ ಸಂಘದಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಸಲಹೆಗಾರರಾದ ರಂಗಸ್ವಾಮಿ, ಉಪಾಧ್ಯಕ್ಷ ಸೋಮಶೇಖರ್, ಇತರರು ಉಪಸ್ಥಿತರಿದ್ದರು.