ಸಾರಾಂಶ
ಪ್ರಜ್ವಲ್ ರೇವಣ್ಣ ವಿರುದ್ಧ ಸಾಂವಿಧಾನಿಕ ಕ್ರಮಗಳನ್ನು ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಘೋರ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳ ಮೇಲೆ ಶಕ್ತಿಶಾಲಿ ಸಾಂವಿಧಾನಿಕ ಕ್ರಮಗಳನ್ನು ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದೆ.ಪ್ರಕರಣದ ಆರೋಪಿಗಳು ಸಾಮಾನ್ಯ ಪ್ರಜೆಗಳಲ್ಲ. ಅವರು ತಮ್ಮ ಪುರುಷಾಧಿಪತ್ಯ ಅಧಿಕಾರವನ್ನು ಪ್ರಯೋಗಿಸಿ ಹೀನ ಅತ್ಯಾಚಾರ ಎಸಗಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಸಮಾನಾದುದಾಗಿದೆ. ಇಂತಹ ಭಯಾನಕ ಕೃತ್ಯ ಎಸಗಲು ಸಮರ್ಥರಾಗಿರುವ ಆರೋಪಿಗಳು ತಮ್ಮ ಅಧಿಕಾರದಿಂದ ತಮ್ಮ ಸರ್ಕಾರದ ಕಾನೂನು ಕ್ರಮಗಳನ್ನು ನಿರ್ಜೀವಗೊಳಿಸುವ ಸಾಧ್ಯತೆ ಇದೆ. ಸನ್ನಿವೇಶದ ಗಂಭೀರತೆಯನ್ನು ಮನಗಂಡು ಸರ್ಕಾರವು ಆರೋಪಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶ ಮಾಡದಂತೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಅಲ್ಲದೇ ಸಂತ್ರಸ್ತರಿಗೆ ಅತ್ಯಂತ ಶಕ್ತವಾದ ದೈಹಿಕ, ಮಾನಸಿಕ, ಸಾಮಾಜಿಕ ಬೆಂಬಲವನ್ನು ನೀಡುವ ಸಕಲ ಕ್ರಮಗಳನ್ನೂ ಕೈಗೊಳ್ಳಬೇಕು. ಸಂತ್ರಸ್ತರು ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರೂ, ಅಧಿಕಾರಹೀನರೂ ಆಗಿರುವುದರಿಂದ ಸರ್ಕಾರವು ಅವರ ಗೌರವ ಘನತೆಯನ್ನು ಮರಳಿ ತಂದು ಕೊಡುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭ ಒಕ್ಕೂಟದ ಪದಾಧಿಕಾರಿಗಳಾದ ವೆರೋನಿಕಾ ಕರ್ನೆಲಿಯೋ, ಡಾ. ಸುನಿತಾ ಶೆಟ್ಟಿ, ರೋಶನಿ ವಲಿವೇರಾ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಮನವಿಯನ್ನು ಸ್ವೀಕರಿಸಿದರು.
;Resize=(128,128))
;Resize=(128,128))
;Resize=(128,128))