ಗೌತಮ್‌ ಅದಾನಿ ಪ್ರಕರಣದಲ್ಲಿ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಿ: ಎಸ್‌.ಆರ್‌. ಹಿರೇಮಠ

| Published : Nov 26 2024, 12:45 AM IST

ಗೌತಮ್‌ ಅದಾನಿ ಪ್ರಕರಣದಲ್ಲಿ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಿ: ಎಸ್‌.ಆರ್‌. ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಸಿಟಿಜನ್ಸ್ ಫಾರ್ ಡೆಮೊಕ್ರಸಿ ಸಂಘಟನೆಯ ರಾಷ್ಟ್ರೀಯ ಸಭೆ ಡಿ. 3,4 ಹಾಗೂ 5ರಂದು ದೆಹಲಿಯಲ್ಲಿ ನಡೆಯಲಿದೆ. ಈ ವೇಳೆ ಅದಾನಿ ಪ್ರಕರಣದ ವಿರುದ್ಧದ ಜನಾಂದೋಲನದ ರೂಪರೇಷ ಸಿದ್ಧಪಡಿಸಿಕೊಳ್ಳಲು ನಿರ್ಧಾರ.

ಧಾರವಾಡ:

ದೇಶದ ಎಲೆಕ್ಟ್ರೋಲ್ ಬಾಂಡ್ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಹೇಗೆ ಕಾನೂನುಬಾಹಿರ ಎಂದು ಬಹಿರಂಗಪಡಿಸಿತೋ ಅದೇ ಮಾದರಿಯಲ್ಲಿ ಉದ್ಯಮಿ ಗೌತಮ್‌ ಅದಾನಿ ಪ್ರಕರಣದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಈ ಹಗರಣಕ್ಕೆ ತಾರ್ಕಿಕ ಅಂತ್ಯ ನೀಡಬೇಕು ಎಂದು ಹೋರಾಟಗಾರ ಎಸ್‌.ಆರ್‌. ಹಿರೇಮಠ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌತಮ್ ಅದಾನಿ ಹಾಗೂ ಅವರ ಕಂಪನಿಗಳ ಭ್ರಷ್ಟಾಚಾರ, ಶೇರು ಅವ್ಯವಹಾರ, ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಅಮೆರಿಕ ಕೋರ್ಟ್ ಕ್ರಮಕೈಗೊಂಡಿದೆ. ಇದನ್ನು ಸಿಎಫ್‌ಡಿ ಸೇರಿದಂತೆ ಇತರ ಸಮಾನ ಮನಸ್ಕ ಸಂಘಟನೆಗಳು ಸ್ವಾಗತಿಸಲಿವೆ ಎಂದ ಅವರು, ಸಿಟಿಜನ್ಸ್ ಫಾರ್ ಡೆಮೊಕ್ರಸಿ ಸಂಘಟನೆಯ ರಾಷ್ಟ್ರೀಯ ಸಭೆ ಡಿ. 3,4 ಹಾಗೂ 5ರಂದು ದೆಹಲಿಯಲ್ಲಿ ನಡೆಯಲಿದೆ. ಈ ವೇಳೆ ಅದಾನಿ ಪ್ರಕರಣದ ವಿರುದ್ಧದ ಜನಾಂದೋಲನದ ರೂಪರೇಷ ಸಿದ್ಧಪಡಿಸಲಾಗುವುದು ಎಂದರು.

ಕಪ್ಪತ್ತಗುಡ್ಡ ಪ್ರಸ್ತಾವ ಕೈಬಿಡಿ:

ಗದಗ ಬಳಿಯ ಕಪ್ಪತ್ತಗುಡ್ಡ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಆಗಿರುವ 28 ಗಣಿಗಾರಿಕೆ ಪ್ರಸ್ತಾವಗಳನ್ನು ಶಾಶ್ವತವಾಗಿ ಕೈಬಿಡಬೇಕು. ಈ ಬಗ್ಗೆ ಮುಂದೆ ಬರಬಹುದಾದ ಪ್ರಸ್ತಾವಗಳನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ ಎಸ್‌.ಆರ್. ಹಿರೇಮಠ, ಅರಣ್ಯ ಪ್ರದೇಶದಲ್ಲಿ ಹೊರತೆಗೆಯುವ ಕಬ್ಬಿಣ ಅದಿರನ್ನು ಅರಣ್ಯೇತರ ಉತ್ಪನ್ನ ಎಂದು ವರ್ಗೀಕರಿಸಬೇಕು. ಜೀವವೈವಿಧ್ಯತೆ ಮತ್ತು ವನ್ಯಜೀವಿಧಾಮ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಕಬ್ಬಿಣ ಮತ್ತು ಮ್ಯಾಗನೀಸ್ ಅದಿರು ಸಾಗಣೆಗೆ ನಿರಂತರ ಅನುಮತಿ ನೀಡಲು ಅಡ್ಡಿ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಲಕ್ಷ್ಮಣ ಬಕ್ಕಾಯಿ, ಮಲ್ಲಿಕಾರ್ಜುನ ಹಾವೇರಿ, ಶಮೀನ್ ಮುಲ್ಲಾ ಇದ್ದರು.