ಗವಿಮಠ ಹಾಸ್ಟೆಲ್‌ನ 41 ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆ

| Published : Nov 06 2024, 12:39 AM IST

ಗವಿಮಠ ಹಾಸ್ಟೆಲ್‌ನ 41 ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗವಿಸಿದ್ಧೇಶ್ವರ ಉಚಿತ 24x7 ಡಿಜಿಟಲ್ ಗ್ರಂಥಾಲಯ ಮತ್ತು ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಅಭ್ಯಾಸ ಮಾಡಿದ 41 ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳಿಗೆ ಈ ವರ್ಷವೇ ನೇಮಕವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳಶ್ರೀ ಗವಿಸಿದ್ಧೇಶ್ವರ ಉಚಿತ 24x7 ಡಿಜಿಟಲ್ ಗ್ರಂಥಾಲಯ ಮತ್ತು ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಅಭ್ಯಾಸ ಮಾಡಿದ 41 ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳಿಗೆ ಈ ವರ್ಷವೇ ನೇಮಕವಾಗಿದ್ದಾರೆ.ಪೊಲೀಸ್ ಇಲಾಖೆಯ ಪರೀಕ್ಷೆಯಲ್ಲಿ 28 ಅಭ್ಯರ್ಥಿಗಳು ತೇರ್ಗಡೆಯಾಗಿ, ವಿವಿಧ ಹುದ್ದೆಗಳಿಗೆ 13 ಅಭ್ಯರ್ಥಿಗಳು ಸೇರಿದಂತೆ ಬರೋಬ್ಬರಿ 41 ಅಭ್ಯರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಕೋವಿಡ್ ಸಮಯದಲ್ಲಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಿ, ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. 2021ರಲ್ಲಿ ಉಚಿತ ಡಿಜಿಟಲ್ ಗ್ರಂಥಲಾಯ ಪ್ರಾರಂಭಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ನೂರಾರು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಿ, ಬದುಕಿಗೆ ದಾರಿಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಂಥಾಲಯದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 1800ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಅದರಲ್ಲೂ ಹಾಸನ, ಮಂಡ್ಯ, ಚಿಕ್ಕಮಂಗಳೂರು, ರಾಯಚೂರು, ಬೀದರ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ 16 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಗ್ರಂಥಾಲಯದ ಉಪಯೋಗ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ.ಸದ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ಪರೀಕ್ಷೆಗಾಗಿ ತಯಾರಿ ನಡೆಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಈ ಮೂರು ವರ್ಷಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ಹಸನಾಗಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಜನವರಿ 2024ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಾಗಿ ನಡೆದ ಪರೀಕ್ಷೆಯಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ 24x7 ಡಿಜಿಟಲ್ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ಗವಿಮಠ ತಿಳಿಸಿದೆ. ಇದಲ್ಲದೆ 9 ವಿದ್ಯಾರ್ಥಿಗಳು ಶಿಕ್ಷಕರಾಗಿ, 2 ವಿದ್ಯಾರ್ಥಿಗಳು ಅಕೌಂಟೆಂಟ್ ಹುದ್ದೆಗಳಿಗೆ, 2 ವಿದ್ಯಾರ್ಥಿಗಳು ಅಸಿಸ್ಟೆಂಟ್ ಎಂಜಿನಿಯರ್, 2 ವಿದ್ಯಾರ್ಥಿಗಳು ಲೈಬ್ರರಿ ಇನ್ಸ್ಟ್ರಕ್ಟರ್, ಒಬ್ಬ ವಿದ್ಯಾರ್ಥಿನಿ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಪೊಲೀಸ್ ಇಲಾಖೆಗೆ ಆಯ್ಕೆಯಾದ 28 ವಿದ್ಯಾರ್ಥಿಗಳನ್ನು ಮತ್ತು ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶ್ರೀಮಠದಿಂದ ಸನ್ಮಾನಿಸಲಾಯಿತು.

ಶ್ರೀಗಳೊಂದಿಗೆ ಚರ್ಚೆ:

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಭೇಟಿಯಾಗಿ ವಿದ್ಯಾರ್ಥಿಗಳು ಗ್ರಂಥಾಲಯದಿಂದ ನಮ್ಮ ಜೀವನ ಬದಲಾಯಿತು. ಗ್ರಂಥಾಲಯದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡಿದ್ದರಿಂದಲೇ ನೌಕರಿಗೆ ಸೇರಿಕೊಳ್ಳುವಂತಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.