ಸಾರಾಂಶ
ಮಹಾಮಾರಿ ಡೆಂಘೀ ರೋಗ ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯ ಒಳಾಂಗಣ, ಹೊರಾಂಗಣ ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕು
ಬಳ್ಳಾರಿ: ಮನೆ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಸಣ್ಣ ನಿರ್ಲಕ್ಷ್ಯವೂ ಡೆಂಘೀ ಜ್ವರದಿಂದ ನರಳುವಂತೆ ಮಾಡಬಹುದು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಮುಕ್ತಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ಡೆಂಘಿ ಜ್ವರ ನಿಯಂತ್ರಣಕ್ಕಾಗಿ ಲಾರ್ವಾ ಸೊಳ್ಳೆಗಳನ್ನು ಪತ್ತೆ ಹಚ್ಚಿ ನಾಶಗೊಳಿಸಲು ರಾಜ್ಯ ಸರ್ಕಾರ ನಿರ್ದೇಶನದಂತೆ ಈಡಿಸ್ ಸೊಳ್ಳೆ ನಿರ್ಮೂಲನ ದಿನದ ಅಂಗವಾಗಿ ನಗರದ ಇಂದಿರಾನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅರಿವು ಮೂಡಿಸಲು ಶುಕ್ರವಾರ ಏರ್ಪಡಿಸಿದ್ದ ಡೆಂಘೀ ನಿಯಂತ್ರಣ ಜಾಥಾದಲ್ಲಿ ಅವರು ಮಾತನಾಡಿದರು.ಮಹಾಮಾರಿ ಡೆಂಘೀ ರೋಗ ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯ ಒಳಾಂಗಣ, ಹೊರಾಂಗಣ ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‍ಬಾಬು ಮಾತನಾಡಿ, ಈಡೀಸ್ ಸೊಳ್ಳೆ ಕಡಿತದಿಂದ ಡೆಂಘೀ ಜ್ವರ ಹರಡಲಿದ್ದು, ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಅವು ಕಚ್ಚುತ್ತವೆ. ಜನಸಾಮಾನ್ಯರು 5-6 ದಿನಗಳಿಗೊಮ್ಮೆ ಶೇಖರಣೆ ಮಾಡಿಕೊಂಡ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್ ಇತರೆ ನೀರಿನ ಸಂಗ್ರಹಾರಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲೆಯಾದ್ಯಂತ ಡೆಂಘೀ ಪ್ರಕರಣ ಕಡಿಮೆಯಿದ್ದು, ರೋಗ ಸಂಪೂರ್ಣ ನಿಯಂತ್ರಿಸಲು ಸಾರ್ವಜನಿಕರು ಇಲಾಖೆಯೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಪ್ರಸ್ತುತ ಮುಂಗಾರಿನಲ್ಲಿ ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಬಳಿಕ ಇಂದಿರಾ ನಗರದಲ್ಲಿ ಮನೆ-ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಲಾರ್ವಾ, ಈಜೀಸ್ ಸೊಳ್ಳೆಗಳಿಂದ ಹರಡುವ ಡೆಂಘೀ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಡೆಂಘೀ ನಿಲ್ಲಿಸಿ ಎನ್ನುವ ಜಾಗೃತಿ ಭಿತ್ತಿಚಿತ್ರ ಪ್ರದರ್ಶಿಸಿದರು.
ಈ ವೇಳೆ ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾ ಕಡಿ, ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್.ದಾಸಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.