ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಜಿಲ್ಲೆಯಲ್ಲಿ 762 ಎಕರೆ 20 ಗುಂಟೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ, ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಆರೋಪಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಮತ್ತು ಭೂಗಳ್ಳರು ಸೇರಿಕೊಂಡು ಸರ್ಕಾರಿ ಭೂಮಿ ಕಬಳಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯಿಂದ ಬೆಳಕಿಗೆ ಬಂದಿದೆ. ಕಂದಾಯ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ದೂರಿದರು.ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ರಿ.ಸ.ನಂ 59 ಕ್ಷೇತ್ರ 152 ಎಕರೆ 20 ಗುಂಟೆ ಹಾಗೂ ರಿ.ಸ.ನಂ 79 ಕ್ಷೇತ್ರ 101 ಎಕರೆ 20 ಗುಂಟೆ ಇವುಗಳ ಒಟ್ಟು ಕ್ಷೇತ್ರ 254 ಎಕರೆ ಇದ್ದು ಸರ್ಕಾರಕ್ಕೆ ಸೇರಿದ ಗುಡ್ಡದ ಪಡ ಎಂದು ಪರಿಗಣಿಸಿರುವ ಈ ಜಮೀನಿಗೆ ಅಧಿಕಾರಿಗಳು ಕರ್ನಾಟಕ ಸರ್ಕಾರ ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಿಸಿಲ್ಲ. ಇದರಿಂದಾಗಿ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಖಾಸಗಿ ವ್ಯಕ್ತಿಗಳು ಸೇರಿಕೊಂಡು 254 ಎಕರೆ ಸರ್ಕಾರಿ ಜಮೀನಿಗೆ ತಮ್ಮ ಹೆಸರನ್ನು ದಾಖಲಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.ಖಾನಾಪುರ ತಾಲೂಕಿನ ಜಾಂಬೋಟಿ ಹೋಬಳಿಯ ಹುಳಂದ ಗ್ರಾಮಕ್ಕೆ ಸೇರಿದ ರಿ.ಸ.ನಂ 03 ಕ್ಷೇತ್ರ 508 ಎಕರೆ 20 ಗುಂಟೆ ಇದರ ಕಾಲಂ ನಂ:11 ಹಾಗೂ 02 ರಲ್ಲಿ ಊರಿನ ಎಲ್ಲ ಜನರು ಎಂದು ದಾಖಲಾಗಿದೆ. ಈ ಜಮೀನು ಹುಳಂದ ಗ್ರಾಮದ ಪ್ರತಿಯೊಬ್ಬರಿಗೂ ಸೇರಿದ ಗ್ರಾಮದ ಆಸ್ತಿಯಾಗಿದೆ ಎಂದು ಹಿರಿಯರು ಹೇಳುತ್ತಾರೆ. ದಾಖಲೆಗಳಿಂದಲೂ ಕಂಡು ಬರುತ್ತದೆ. ಆದರೆ, ಖಾನಾಪುರ ತಹಸೀಲ್ದಾರ ಭೂ ಕಂದಾಯ ನಿಯಮ ಗಾಳಿಗೆ ತೂರಿ ಊರಿನ ಎಲ್ಲ ಜನರು ಎಂಬ ರಿ.ಸ.ನಂ. 03ರ ಪಹಣಿ ಪತ್ರಿಕೆಯಲ್ಲಿ ದಾಖಲನ್ನು ಕಡಿಮೆ ಮಾಡಲು ಆದೇಶ ಹೊರಡಿಸುವ ಮೂಲಕ ಕರ್ತವ್ಯಲೋಪ ಎಸಗಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ಪ್ರಕರಣದ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಸೇರಿ ಜಮೀನುಗಳು ಎಂದು ದಾಖಲೆ ಹೇಳುತ್ತಿದ್ದರೂ ಒಟ್ಟು 762 ಎಕರೆ 20 ಗುಂಟೆ ಜಮೀನನ್ನು ಕರ್ನಾಟಕ ಸರ್ಕಾರ ಎಂದು ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂದು ದೂರಿದರು.