ಕೃಷಿಯನ್ನು ಅಪ್ಪಿ ಯಶಸ್ಸು ಕಂಡ ಪದವೀಧರ

| Published : Aug 21 2024, 12:31 AM IST

ಸಾರಾಂಶ

ಪದವಿ ಶಿಕ್ಷಣ ಗಳಿಸಿ ಸರ್ಕಾರಿ ಕೆಲಸಕ್ಕಾಗಿ ಅಲೆದು ಬೇಸತ್ತು ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ತೀರ ವಿರಳ. ಆದರೆ ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಯುವ ರೈತ ಬಿ.ಎ. ಪದವಿ ಪಡೆದು ಸಿಕ್ಕ ಪೊಲೀಸ್ ಕೆಲಸಕ್ಕೆ ಹೋಗದೆ ಜೀವನಾಧಾರಿತವಾಗಿ ಕೃಷಿಯನ್ನೇ ಆಯ್ಕೆ ಮಾಡಿಕೊಂಡು ಯಶಸ್ಸು ಕಂಡುಕೊಳ್ಳುವ ಮೂಲಕ ಹಲವಾರು ಕೃಷಿ ಪ್ರಶಸ್ತಿಗಳನ್ನು ಗಳಿಸಿಕೊಂಡು ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಈ ಬಾರಿಯ ಪ್ರಶಸ್ತಿಯನ್ನು ನವೀನ್ ಕುಮಾರ್ ಅವರಿಗೆ ಪ್ರದಾನ ಮಾಡಿದರು.

ಶೇಖರ್‌ ಯಲಗತವಳ್ಳಿ ಕನ್ನಡಪ್ರಭ ವಾರ್ತೆ ಅರಕಲಗೂಡು

ಪದವಿ ಶಿಕ್ಷಣ ಗಳಿಸಿ ಸರ್ಕಾರಿ ಕೆಲಸಕ್ಕಾಗಿ ಅಲೆದು ಬೇಸತ್ತು ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ತೀರ ವಿರಳ. ಆದರೆ ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಯುವ ರೈತ ಬಿ.ಎ. ಪದವಿ ಪಡೆದು ಸಿಕ್ಕ ಪೊಲೀಸ್ ಕೆಲಸಕ್ಕೆ ಹೋಗದೆ ಜೀವನಾಧಾರಿತವಾಗಿ ಕೃಷಿಯನ್ನೇ ಆಯ್ಕೆ ಮಾಡಿಕೊಂಡು ಯಶಸ್ಸು ಕಂಡುಕೊಳ್ಳುವ ಮೂಲಕ ಹಲವಾರು ಕೃಷಿ ಪ್ರಶಸ್ತಿಗಳನ್ನು ಗಳಿಸಿಕೊಂಡು ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.ನವೀನ್ ಕುಮಾರ್ ಅವರ ಕೃಷಿ ಕಾಯಕಕ್ಕೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಶ್ರೀ ಅರಸೀಕಟ್ಟೆ ಅಮ್ಮ ದೇವಲಯ ಸಮಿತಿ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಈ ಬಾರಿಯ ಪ್ರಶಸ್ತಿಯನ್ನು ನವೀನ್ ಕುಮಾರ್ ಅವರಿಗೆ ಪ್ರದಾನ ಮಾಡಿದರು.ತಮ್ಮ 12 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅಲಸಂದೆ, ಅವರೆ ಮತ್ತು ತರಕಾರಿ ಬೆಳೆಗಳಾದ ತೊಂಡೆಕಾಯಿ, ಮೆಣಸಿನಕಾಯಿ, ಬದನೆ, ಜೀನ್ಸ್, ಮಗ್ಗೆ, ಸುವರ್ಣಗೆಡ್ಡೆ, ಕಸವಾ, ಶುಂಠಿ, ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಕಾಫಿ, ಕಾಳು ಮೆಣಸು, ಏಲಕ್ಕಿ, ವೀಳ್ಯದೆಲೆ, ಹಲಸು, ದಾಳಿಂಬೆ, ಕಿತ್ತಳೆ, ನಿಂಬೆ, ಮಾವು, ನೇರಳೆ, ಸೀಬೆ, ಅನಾನಸ್, ಬೆಟ್ಟದನೆಲ್ಲಿ, ಪಪ್ಪಾಯ, ಚಿಕ್ಕೆ, ಲವಂಗ, ಅಂಜೂರ, ಸೇವಂತಿಗೆ ಜೊತೆಗೆ ಕೈತೋಟದಲ್ಲಿ ಮನೆ ಬಳಕೆಗೆ ಬೇಕಾದ ಸೊಪ್ಪಿನ ತರಕಾರಿಗಳು, ಈರುಳ್ಳಿ ಬೆಳ್ಳುಳ್ಳಿ, ಔಷದೀಯ ಗಿಡಗಳನ್ನು ಬೆಳೆದು ಉಪಯೋಗಿಸುತ್ತಿದ್ದಾರೆ. ಇದಲ್ಲದೇ ಆಡಿಕೆ ಮತ್ತು ತೆಂಗಿನ ನರ್ಸರಿ ಮಾಡಿಕೊಂಡು ಸಸಿಗಳನ್ನು ಮಾರಾಟ ಮಾಡಿ ಅಧಿಕ ಆದಾಯ ಗಳಿಸುತ್ತಿದ್ದಾರೆ. ಇವರು ಬದುಗಳ ಮೇಲೆ ಸಾಗುವಾನಿ, ಸಿಲ್ವರ್‌ ಓಕ್, ಹೆಬ್ಬೇವು, ಶ್ರೀಗಂಧ, ತೇಗ, ಹುಣಸೆ, ರಕ್ತಚಂದನ ಮರಗಳನ್ನು ಬೆಳೆದಿದ್ದಾರೆ.ಕೃಷಿ ಏಳಿಗೆಗೆ ಹೈನುಗಾರಿಕೆಯೂ ಅವಶ್ಯ ಇದರಿಂದ ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಬಳಸಿದರೆ ಮಣ್ಣಿನ ಫಲವತ್ತತೆ ಉಳಿಸಿಕೊಂಡು ಬೆಳೆಗಳನ್ನು ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯ. ಅಲ್ಲದೇ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮನುಷ್ಯನಿಗೆ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅನಾರೋಗ್ಯದ ಕಂಟಕದಿಂದ ಪಾರಾಗಲು ಸಾವಯವ ಕೃಷಿ ಮುಖ್ಯ ಎಂಬುದನ್ನು ಮನಗಂಡು ಪಶುಸಂಗೋಪನೆಯನ್ನು ಅಳವಡಿಸಿಕೊಂಡಿದ್ದು ಪೆರ್ಸಿ, ಎಚ್, ಎಫ್, ಹಸು, ಕುರಿ, ಮೇಕೆ, ಸ್ವರ್ಣಧಾರ, ನಾಟಿ ಕೋಳಿ, ಮೊಲ, ಬಾತು ಕೋಳಿ, ಹಂದಿ ಮತ್ತು ಮೀನು ಸಾಕಣೆ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಮೇವಿನ ಬೆಳೆಗಳಾದ ಮೆಕ್ಕೆಜೋಳ, ನೇಪಿಯರ್ ಹುಲ್ಲು, ಜೋಳ, ಅಜೋಲ್ಲಾ ಮತ್ತು ಆಗಸೆಯನ್ನು ಬೆಳೆದು ಬಳಸುತ್ತಿದ್ದಾರೆ. ಇದರ ಜೊತೆಗೆ ಜೇನು ಕೃಷಿಯನ್ನು ಕೈಗೊಂಡಿದ್ದು 5 ಜೇನು ಪೆಟ್ಟಿಗೆಗಳನ್ನು ಹೊಂದಿದ್ದು ವಾರ್ಷಿಕವಾಗಿ 10 ಕಿ.ಗ್ರಾಂ. ತುಪ್ಪವನ್ನು ಪಡೆಯುವುದರ ಜೊತೆಗೆ ಬೆಳೆಗಳಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಿ ಅಧಿಕ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಮನೆ ಬಳಕೆಗೆ ಗೋಬರ್ ಗ್ಯಾಸ್ ಅನಿಲವನ್ನು ಅಳವಡಿಸಿಕೊಂಡಿದ್ದು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ತಮ್ಮ ಜಮೀನಿನಲ್ಲಿ ಇಳಜಾರಿಗೆ ಅಡ್ಡಲಾಗಿ ಉಳುಮೆ, ಬದುಗಳ ನಿರ್ಮಾಣ, ನೀರು ಕಾಲುವೆಗಳ ನಿರ್ಮಾಣ. ಮಾಗಿ ಉಳುಮೆ, ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಹಾಗೂ ಇತರೆ ಕ್ರಮಗಳನ್ನು ಅನುಸರಿಸಿದ್ದಾರೆ. ಇವರು ನೀರಿನ ಸದ್ಬಳಕೆಗಾಗಿ ತುಂತುರು ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.ಸಮಗ್ರ ಪೋಷಕಾಂಶ ನಿರ್ವಹಣೆಗೆ ಒತ್ತು ನೀಡಿದ್ದು ಕಾಂಪೋಸ್ಟ್, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರಗಳು ಮತ್ತು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತಿದ್ದಾರೆ. ಇದರ ಜೊತೆಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದು ಜೈವಿಕ ಗೊಬ್ಬರ, ಜೀವಾಮೃತ, ಬೇವಿನ ಎಣ್ಣೆ, ಬೇವಿನ ಹಿಂಡಿ, ಗಂಜಲ, ಹುಳಿ ಮಜ್ಜಿಗೆ, ಜೀವಾಮೃತ, ಪಂಚಗವ್ಯ, ಬೊಗಡು ಇತ್ಯಾದಿ ಜೈವಿಕ ಪೀಡೆನಾಶಕಗಳನ್ನು ಬಳಸಿ ಸಮಗ್ರ ಪೀಡೆ ನಿರ್ವಹಣೆ ಮಾಡಿ ಪರಿಸರವನ್ನು ಸಂರಕ್ಷಿಸುತ್ತಿದ್ದಾರೆ. ಬೆಳೆದ ಬೆಳೆಗಳ ಉತ್ಪನ್ನಗಳನ್ನು ಕಣಜ ಮತ್ತು ಪಾಲಿಥಿನ್ ಚೀಲಗಳಲ್ಲಿ ಶೇಖರಣೆ ಮಾಡುತ್ತಿದ್ದಾರೆ.ರೈತರಿಗೆ ಪ್ರೇರಣೆ: ವಿವಿಧ ಕೃಷಿ ಯಂತ್ರೋಪಕರಣಗಳಾದ ಪವರ್‌ ವೀಡರ್, ಸಿಂಪರಣಾ ಯಂತ್ರಗಳು, ಕಳೆ ತೆಗೆಯುವ ಯಂತ್ರ, ಸೈಕಲ್ ವೀಡರ್‌, ಮೇವು ಕತ್ತರಿಸುವ ಯಂತ್ರ ಹಾಗೂ ಇತರೆ ಯಂತ್ರಗಳನ್ನು ಹೊಂದಿದ್ದು ಕೃಷಿ ಕಾರ್ಮಿಕರ ತೊಂದರೆಯನ್ನು ನೀಗಿಸಿ ಕೃಷಿಯನ್ನು ಸುಲಭವಾಗಿಸಿಕೊಂಡಿದ್ದಾರೆ. ಇವರು ಸಮೂಹ ಮಾಧ್ಯಮಗಳಾದ ರೇಡಿಯೋ, ಟಿ.ವಿ. ಮತ್ತು ಪತ್ರಿಕೆಗಳಲ್ಲಿ ಸಮಗ್ರ ಕೃಷಿ ಮತ್ತು ಜೇನು ಸಾಕಣೆ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುತ್ತಾರೆ. ಅಲ್ಲದೆ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಕೃಷಿಯಲ್ಲಿನ ಸಾಧನೆಯ ಮಾರ್ಗದ ಕುರಿತು ಅನುಭವವನ್ನು ಹಂಚಿಕೊಂಡು ಇತರೆ ರೈತರಿಗೂ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಇವರು ಹಾಲು ಉತ್ಪಾದಕರ ಸಂಘದ ಸದಸ್ಯರಾಗಿ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಶ್ರೀ ರಂಗನಾಥಸ್ವಾಮಿ ಯುವಕರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.ಪ್ರಗತಿಪರ ರೈತ ಪ್ರಶಸ್ತಿ: ಇಷ್ಟಲ್ಲದೇ ನವೀನ್ ಕುಮಾರ್‌ ಕೃಷಿಗೆ ಸಂಬಂಧಿಸಿದ ಪ್ರಕಟಣೆಯಾದ ಅನ್ನದಾತ ಮಾಸ ಪತ್ರಿಕೆಗೆ ಚಂದದಾರರಾಗಿದ್ದು, ಕೃಷಿಯಲ್ಲಿ ಹೊಸ ಅವಿಷ್ಕಾರಗಳ ಬಗ್ಗೆ ಮಾಹಿತಿ ಪಡೆಯುವರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ವಿವಿಧ ವಿಚಾರಗಳನ್ನು ಸಕ್ರಿಯವಾಗಿ ಚರ್ಚಿಸುವರು. ಇವರು ತಮ್ಮ ಕೃಷಿಯ ಸಾಧನೆಗೆ 2015-16ರಲ್ಲಿ ತಾಲೂಕು ಆಡಳಿತದಿಂದ ತಾಲೂಕು ರೈತ ಪ್ರಶಸ್ತಿ, 2017-18 ರ ಕೃಷಿ ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ತಾಲೂಕು ಮಟ್ಟದ ಪ್ರಗತಿಪರ ಯುವ ರೈ ತ ಪ್ರಶಸ್ತಿ, 2018- 19ರಲ್ಲಿ ಹಾಸನ ಪಿಯು ಕಾಲೇಜು ವತಿಯಿಂದ ಪ್ರಗತಿಪರ ರೈತ ಪ್ರಶಸ್ತಿ ಗಳಿಸಿದ್ದಾರೆ. 2019-20ರ ಕೃಷಿ ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿಗೆ ಭಾಜನರಾಗಿದ್ದರು. ನವೀನ್ ಕುಮಾರ್‌ ಅವರು ಕೃಷಿ ಕ್ಷೇತ್ರಕ್ಕೆ ಕೊಟ್ಟ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2019-20 ನೇ ಸಾಲಿನ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ 50 ಸಾವಿರ ರು. ಬಹುಮಾನದೊಂದಿಗೆ 2020ರ ಕೃಷಿ ಮೇಳದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಗೆಕೆ ಪಾತ್ರರಾಗಿದ್ದಾರೆ.

ಫೋಟೋ ಶೀರ್ಷಿಕೆ.......ಅರಕಲಗೂಡು ತಾಲೂಕು ಚಿಕ್ಕಬೊಮ್ಮನಹಳ್ಳಿ ಯುವ ಕೃಷಿಕ ನವೀನ್ ಕುಮಾರ್‌ ಅವರು ಸಾಕಿರುವ ವಿವಿಧ ತಳಿಯ ಕೋಳಿಗಳು.