ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಉತ್ಸಾಹ ತೋರಿದ ಪದವೀಧರರು

| Published : Nov 08 2025, 02:15 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಈ ಹಿಂದೆ 2019-20ರಲ್ಲಿ 9092 ಮಂದಿ ಪದವೀಧರರು ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದು, ಈ ಬಾರಿಯ ಮತದಾರರ ನೋಂದಣಿಗೆ ನ. 6ರ ವರೆಗೆ 14,750 ಮಂದಿ ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ.

ಕಾರವಾರ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ 2026ರಲ್ಲಿ ನಡೆಯಲಿರುವ ಚುನಾವಣೆಗೆ ಮತದಾರರಾಗಿ ನೋಂದಣಿ ಮಾಡಲು ಜಿಲ್ಲೆಯ ಪದವೀಧರರು ಹೆಚ್ಚಿನ ಉತ್ಸಾಹ ತೋರಿದ್ದು, ಕಳೆದ ಬಾರಿಯ ಮತದಾರರ ಪಟ್ಟಿಯಲ್ಲಿದ್ದ ಸಂಖ್ಯೆಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಈ ಹಿಂದೆ 2019-20ರಲ್ಲಿ 9092 ಮಂದಿ ಪದವೀಧರರು ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದು, ಈ ಬಾರಿಯ ಮತದಾರರ ನೋಂದಣಿಗೆ ನ. 6ರ ವರೆಗೆ 14,750 ಮಂದಿ ಪದವೀಧರರು ನೋಂದಣಿ ಮಾಡಿಕೊಂಡಿದ್ದು, ಕಳೆದ ಬಾರಿಗಿಂತ 5658 ಮಂದಿ ಪದವೀಧರರು ಹೆಚ್ಚುವರಿ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಕಾರವಾರ ತಾಲೂಕಿನಲ್ಲಿ 1703, ಅಂಕೋಲಾದಲ್ಲಿ 1510, ಕುಮಟಾದಲ್ಲಿ 2052, ಹೊನ್ನಾವರದಲ್ಲಿ 1175, ಭಟ್ಕಳದಲ್ಲಿ 1016, ಶಿರಸಿಯಲ್ಲಿ 2454, ಸಿದ್ದಾಪುರದಲ್ಲಿ 1254, ಯಲ್ಲಾಪುರದಲ್ಲಿ 952, ಮುಂಡಗೋಡದಲ್ಲಿ 874, ಹಳಿಯಾಳದಲ್ಲಿ 806, ಜೋಯಿಡಾದಲ್ಲಿ 256, ದಾಂಡೇಲಿಯಲ್ಲಿ 698 ಮಂದಿ ಪದವೀಧರರು ಸೇರಿದಂತೆ 14750 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ನ. 1, 2025ಕ್ಕೆ ಮುಂಚೆ ಕನಿಷ್ಠ 3 ವರ್ಷ ಮೊದಲು ಭಾರತದಲ್ಲಿರುವ ಯಾವುದೇ ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು, ತಮ್ಮ ಅರ್ಜಿಯನ್ನು ನಮೂನೆ 18ರಲ್ಲಿ, ಪದವಿ ಪ್ರಮಾಣ ಪತ್ರದ ಪ್ರತಿಯನ್ನು ಪತ್ರಾಂಕಿತ ಅಧಿಕಾರಿಯ ಮೇಲುರುಜು ಮಾಡಿಸಿ, ಅಗತ್ಯ ವಿಳಾಸದ ದಾಖಲೆಗಳೊಂದಿಗೆ ನ. 6ರೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಈ ಅರ್ಜಿಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಕೆಂದ್ರಗಳನ್ನು ತೆರೆಯಲಾಗಿತ್ತು.

ಮತದಾರರ ನೋಂದಣಿ ಕಾರ್ಯದ ಆರಂಭದಲ್ಲಿ ಪದವೀಧರರಿಂದ ನೀರಸ ಸ್ಪಂದನೆ ವ್ಯಕ್ತವಾಗಿ, ನೋಂದಣಿ ಕಾರ್ಯದಲ್ಲಿ ಹಿನ್ನಡೆಯಾಗುವ ಸ್ಥಿತಿ ಉಂಟಾಗಿದ್ದು, ಆನಂತರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ನೋಂದಣಿ ಕುರಿತು ಖುದ್ದಾಗಿ ಆಸಕ್ತಿ ಮತ್ತು ಜವಾಬ್ದಾರಿ ವಹಿಸಿಕೊಂಡು, ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿನ ಪದವೀಧರ ಅಧಿಕಾರಿಗಳು, ನೌಕರರು ಮತ್ತು ಇತರ ಪದವೀಧರರನ್ನು ಖುದ್ದು ಭೇಟಿ ಮಾಡಿ, ಮತದಾನದ ಮಹತ್ವದ ಬಗ್ಗೆ ಮತ್ತು ಪದವೀಧರರ ಜವಾಬ್ದಾರಿಗಳ ಬಗ್ಗೆ ತಿಳಿಸಿ, ಮನವೊಲಿಸಿದ ಪರಿಣಾಮ, ನೋಂದಣಿ ಕಾರ್ಯಕ್ಕೆ ವೇಗ ದೊರೆತು, ಹೆಚ್ಚಿನ ಸಂಖ್ಯೆಯ ಮತದಾರರ ನೋಂದಣಿ ಸಾಧ್ಯವಾಯಿತು.

ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರವು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಪ್ರಸ್ತುತ ಈ ಕ್ಷೇತ್ರದ ಸದಸ್ಯರ ಅವಧಿಯು 2026 ನ. 11ರಂದು ಮುಕ್ತಾಯಗೊಳ್ಳಲಿದೆ. ದ್ವೈವಾರ್ಷಿಕ ಚುನಾವಣೆಯ ಮೂಲಕ ಈ ಸ್ಥಾನವನ್ನು ಭರ್ತಿ ಮಾಡಬೇಕಾಗಿದೆ.

ಭಾರತ ಚುನಾವಣಾ ಆಯೋಗವು ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ನ. 25ಕ್ಕೆ ಪ್ರಕಟಿಸಲಿದ್ದು, ಡಿ. 10ರ ವರೆಗೆ ತಿದ್ದುಪಡಿ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದೆ. ಡಿ. 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ.