ಕೃಷಿಯತ್ತ ಪದವೀಧರರು ಮುಖ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ-ಡಿ. ಯತೀಶಕುಮಾರ

| Published : Mar 22 2024, 01:02 AM IST

ಕೃಷಿಯತ್ತ ಪದವೀಧರರು ಮುಖ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ-ಡಿ. ಯತೀಶಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರರು ಇಂದಿನ ಜಾಗತಿಕ ದಿನಮಾನಗಳಲ್ಲಿ ಕೃಷಿ ಚಟುವಟಿಕೆಯತ್ತ ವಾಲುತ್ತಿರುವುದು ಸಂತಸಕರ ಸಂಗತಿಯಾಗಿದೆ ಎಂದು ಧಾರವಾಡ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಹೇಳಿದರು.

ಹಾವೇರಿ: ಪದವೀಧರರು ಇಂದಿನ ಜಾಗತಿಕ ದಿನಮಾನಗಳಲ್ಲಿ ಕೃಷಿ ಚಟುವಟಿಕೆಯತ್ತ ವಾಲುತ್ತಿರುವುದು ಸಂತಸಕರ ಸಂಗತಿಯಾಗಿದೆ ಎಂದು ಧಾರವಾಡ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಹೇಳಿದರು.

ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ಸಂಸ್ಥಾಪನಾ ದಿನಾಚರಣೆ ಹಾಗೂ ಉಪನ್ಯಾಸ ಮಾಲಿಕೆ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪದವಿ ಮುಗಿದ ಆನಂತರ ಕೇವಲ ಸರ್ಕಾರಿ ಕೆಲಸ ಅರಸದೇ ಸಾಂಪ್ರದಾಯಿಕ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ವೃತ್ತಿಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಡಿಎಸ್‌ಪಿ ಡಿ.ಡಿ. ಮಾಳಗಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣದ ಅಗತ್ಯವಿದ್ದು, ಹಾವೇರಿ ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ. ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ವಿವೇಕಯುತ ಜ್ಞಾನದ ಪ್ರಸಾರ ಕಾರ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕಾದ ಅಗತ್ಯವಿದೆ. ಹಾವೇರಿ ವಿಶ್ವವಿದ್ಯಾಲಯವು ವೃತ್ತಿಪರ ಕೌಶಲಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಶಿಕ್ಷಣದಲ್ಲಿ ಜೀವನದ ಮೌಲ್ಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇಂದಿನ ಪಠ್ಯದಲ್ಲಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದರಿಂದ ವಿದ್ಯಾರ್ಥಿ ಸಮುದಾಯದ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸುರೇಶ ಎಚ್. ಜಂಗಮಶೆಟ್ಟಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವ ಮೂಲಕ ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಹಾವೇರಿ ವಿ.ವಿ. ಅಧೀನ ಕಾಲೇಜುಗಳ ಪ್ರಾಚಾರ್ಯರು ಮತ್ತು ಬೋಧಕ ಸಿಬ್ಬಂದಿಯ ಸಹಕಾರದಿಂದ ಇದು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಹಾವೇರಿ ವಿಶ್ವವಿದ್ಯಾಲಯದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮಿ ತಿರ್ಲಾಪುರ ವಾರ್ಷಿಕ ವರದಿ ವಾಚಿಸಿದರು. ಡಾ. ಚಿದಾನಂದ ಕಮ್ಮಾರ್, ಡಾ. ಗೀತಾ ಬೆಳಗಾವಿ ಪರಿಚಯಿಸಿದರು. ಡಾ. ವಿಶ್ವನಾಥ ಚಿಂತಾಮಣಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವಿಜಯಕುಮಾರ ಕೇಲೂರ ವಂದಿಸಿದರು.