ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ್, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಆಗ್ರಹಿಸಿ ಶನಿವಾರ ಗ್ರಾಮ ಪಂಚಾಯತಿ ನೌಕರರ ಸಂಘದ ಸದಸ್ಯರು ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.ಸೇವಾ ಹಿರಿತನ ಪರಿಗಣಿಸಿ ಇನ್ಕ್ರಿಮೆಂಟ್ ನೀಡಬೇಕು. ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ₹6 ಸಾವಿರ ಇಡಗಂಟು ಕೊಡಬೇಕು. ಗ್ರಾಮ ಪಂಚಾಯತಿಗಳಲ್ಲಿ ಠರಾವು ಮೂಲಕ ನೇಮಕಾತಿಯಾಗಿರುವವರಿಗೂ ಇಡಗಂಟು ನೀಡಬೇಕು ಎಂದು ಆಗ್ರಹಿಸಿದರು.
ತರಬೇತಿ ಪಡೆದಿರುವ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಪ್ಪಂದ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಪ್ರತಿಯೊಂದು ಪಂಚಾಯಿತಿಗೆ ಒಬ್ಬರೇ ಚಾಲಕರೆಂದು ಪರಿಗಣಿಸಿ 15 ಸಾವಿರ ರೂ. ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಬೇಕು. ಈಗಾಗಲೇ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅಂತಹವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿ ಮಾಡಬೇಕು. 2017ರೊಳಗೆ ಇರುವ ಹೆಚ್ಚುವರಿ ಕರ ವಸೂಲಿಗಾರರಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮೊದಲನೇ ಡಾಟಾ ಎಂಟ್ರಿ ಆಪ್ರೇಟರ್ಗಳಿಗೆ ಕ್ಲರ್ಕ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕೆಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ನೀಡಬೇಕು ಎಂದು ಕೋರಿದರು.ಪಂಚಾಯಿತಿಗಳಲ್ಲಿ ಖಾಲಿ ಇರುವ ಕರ ವಸೂಲಿಗಾರ, ನೀರುಗಂಟಿ ಮುಂದಾದ ಹುದ್ದೆಗಳನ್ನು ಭರ್ತಿ ಮಾಡಬೇಕು. ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.
ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಪಂಚಾಯತಿ ಅಭಿವೃದ್ಧಿ ಅಕಾರಿಗಳ ಹುದ್ದೆಗೆ ಶೇ.60ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಚವ್ಹಾಣ, ಮಾರುತಿ ದಾಸರ, ಶಂಕರ ಕಟಗೇರಿ, ಹನಮಂತ ಮಜ್ಜಗಿ ಮತ್ತಿತರರು ಪಾಲ್ಗೊಂಡಿದ್ದರು.