ಸಾರಾಂಶ
ಅಂಬಳೆ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಉದ್ಘಾಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಧಿಕಾರ ವಿಕೇಂದ್ರೀಕರಣದ ಮೂಲ ಸ್ಥಾನ ಗ್ರಾಮ ಪಂಚಾಯಿತಿ. ಅಧಿಕಾರದ ಜೊತೆಗೆ ಮೂಲಭೂತ ಸೌಕರ್ಯಗಳು ಒಟ್ಟಿಗೆ ಸಮ್ಮಿಲನಗೊಂಡಾಗ ಆ ಪಂಚಾಯಿತಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಮೂಡಿಗೆರೆ ಕ್ಷೇತ್ರದ ಅಂಬಳೆ ಗ್ರಾಮದಲ್ಲಿ ಸೋಮವಾರ ಗ್ರಾಪಂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಕಳೆದ 5 ತಿಂಗಳಲ್ಲಿ ಗ್ರಾಮ ಪಂಚಾಯಿತಿ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದ ಅವರು, ಈಗಾಗಲೇ ಕ್ಷೇತ್ರದ ವ್ಯಾಪ್ತಿ ಮಲೆನಾಡು ಭಾಗದಲ್ಲಿ ಹಲವಾರು ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಸಮರ್ಪಣೆ ಮಾಡಿದ್ದೇವೆಂದು ಹೇಳಿದರು.ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಸದಸ್ಯರು ಒಗ್ಗಟ್ಟಾಗಿ ಜನಪರ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆಗಳು ನನ್ನ ಬಳಿ ಬರುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಕಟ್ಟಡ ನಿರ್ಮಾಣವಾಗಬೇಕು, ಇದಕ್ಕೆ ಬೇಕಾದ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಜನರು ತೋರಿಸುವ ಪ್ರೀತಿ ಮಲೆನಾಡು ಭಾಗದಲ್ಲಿ ಸಿಗುತ್ತಿಲ್ಲ. ಕೆಲಸದ ಒತ್ತಡದಲ್ಲಿ ಮಾನವೀಯತೆ ಮರೆತಿರುತ್ತೇವೆ. ಪುನಃ ಆ ಪ್ರೀತಿ ಮರುಕಳಿಸುವಂತೆ ತೋರಿದ ಹಿರಿಯರಿಗೆ ತುಂಬು ಹೃದಯದ ಧನ್ಯವಾದ ಗಳನ್ನು ಅರ್ಪಿಸುತ್ತೇನೆ ಎಂದರು.ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ಇತಿಹಾಸ ಹಾಗೂ ಐತಿಹಾಸಿಕ ವಾಗಿ ಇರುವ ದೊಡ್ಡ ಗ್ರಾಮ ಪಂಚಾಯಿತಿ ಇದಾಗಿದ್ದು, 94 ವರ್ಷಗಳ ನಂತರ ನೂತನ ಕಟ್ಟಡ ನಿರ್ಮಾಣ ಆಗಿರುವುದು ಯೋಗಾ ಯೋಗಗಳ ಫಲ ಎಂದು ಹೇಳಿದರು.ಐತಿಹಾಸಿಕ ಹೊಯ್ಸಳ ಕಾಲದ ಶಿಲ್ಪಕಲೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಆರ್ ಕೃಷ್ಣಶಾಸ್ತ್ರಿ ಜನಿಸಿದ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣದ ನಂತರ ಸಾರ್ವಜನಿಕರಿಗೆ ಸಮರ್ಪಣೆಯಾಗಿ ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರವಾಗಬೇಕು. ಜೊತೆಗೆ ಗ್ರಂಥಾಲಯ ಸ್ಥಾಪಿಸಿ ಗ್ರಾಮಸ್ಥರ ಸಾರ್ವಜನಿಕ ಕಾರ್ಯ ಕ್ರಮಗಳಿಗೆ ಸದ್ಭಳಕೆಯಾಗಲಿ ಎಂದು ಹಾರೈಸಿದರು.ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂಬ ಕನಸು ಈ ಮೂಲಕ ನನಸಾಗಿದ್ದು, ನನ್ನ ರಾಜಕೀಯ ಬೆಳವಣಿಗೆಗೆ ಅಂಬಳೆ ಹೋಬಳಿ ಜನರ ಆಶೀರ್ವಾದ ಕಾರಣ ಎಂದು ಸ್ಮರಿಸಿದರು.ಮಾಜಿ ಸಚಿವೆ ಮೋಟಮ್ಮನವರ ನೇತೃತ್ವದಲ್ಲಿ ಜಾರಿಗೆ ಬಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮಹಿಳಾ ಆರ್ಥಿಕ ಸಬಲೀಕರಣಗೊಳ್ಳಲು ಪ್ರಮುಖ ಪಾತ್ರ ವಹಿಸಿದವು ಎಂದು ಹೇಳಿದರು.ನೂತನ ಕಟ್ಟಡ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ ಮಾತನಾಡಿ, 1931 ರಲ್ಲಿ ಬ್ರಿಟೀಷ್ ಕಾಲದಲ್ಲಿ ನಿರ್ಮಾಣ ವಾಗಿದ್ದ ಗ್ರಾಪಂ ಕಟ್ಟಡ ತುಂಬಾ ಶಿಥಿಲಗೊಂಡಿದ್ದು, 94 ವರ್ಷಗಳ ಬಳಿಕ ನೂತನ ಕಟ್ಟಡ ನಿರ್ಮಿಸಬೇಕೆಂಬ ಕನಸು ಇಂದು ನೆರವೇರಿದೆ ಎಂದರು.ಈ ಕಾರ್ಯಕ್ಕೆ ಸಹಕರಿಸಿದ ಶಾಸಕರು, ಸದಸ್ಯರು, ಗುತ್ತಿಗೆದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಭಾಗ್ಯ ಲಕ್ಷ್ಮಣಗೌಡ, ಸದಸ್ಯರಾದ ಅಶ್ವಿನಿ ಕೆ.ಎನ್ ಮಹೇಶ್, ಗಂಗಾಧರ್, ಚಂದ್ರಮ್ಮ, ಮಲಿಯಮ್ಮ, ಲಕ್ಷ್ಮಮ್ಮ, ವಿಜಯಮ್ಮ, ಚಿದಾನಂದ್, ವಿಜಯ್ ಕುಮಾರ್, ಸಾವಿತ್ರಮ್ಮ, ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಪಾರ್ವತಮ್ಮ, ಪಿಡಿಒ ಗಂಗಾಧರ್ ಉಪಸ್ಥಿತರಿದ್ದರು.
19 ಕೆಸಿಕೆಎಂ 3ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಬಳೆ ಗ್ರಾಮ ಪಂಚಾಯ್ತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು.