ಸಾರಾಂಶ
ಕೇಳ್ರಪ್ಪೋ ಕೇಳಿ, ನಮ್ಮ ಅಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯವರು ಮತ್ತು ಬೆಸ್ಕಾಂ ಕಚೇರಿಯವರು ಲಕ್ಷಾಂತರ ರುಪಾಯಿ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕೇಳ್ರಪ್ಪೋ ಕೇಳಿ, ನಮ್ಮ ಅಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯವರು ಮತ್ತು ಬೆಸ್ಕಾಂ ಕಚೇರಿಯವರು ಲಕ್ಷಾಂತರ ರುಪಾಯಿ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಇವರಿಗೆ ಸಾಕಷ್ಟು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಕಂದಾಯ ಕಟ್ಟಿಲ್ಲ. ಇದರಿಂದಾಗಿ ನಮ್ಮ ಗ್ರಾಮ ಪಂಚಾಯಿತಿಯ ನೌಕರರಿಗೆ, ಸಿಬ್ಬಂದಿ ವರ್ಗದವರಿಗೆ ಸಂಬಳ ಕೊಡಲು ಸಾಧ್ಯವಾಗ್ತಿಲ್ಲ. ಕೂಡಲೇ ಬಾಕಿ ಇರುವ ಕಂದಾಯವನ್ನು ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಇದು ಕೊನೆ ಎಚ್ಚರಿಕೆ. ಕೇಳ್ರಪ್ಪೋ ಕೇಳಿ…ಇದು ತಾಲೂಕಿನ ಅಮ್ಮಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಅಲ್ಲಿನ ಸಿಬ್ಬಂದಿ ಕಂದಾಯ ಬಾಕಿ ಇರುವವರ ಮನೆ ಮತ್ತು ಕಚೇರಿಯ ಬಳಿ ತಮಟೆ ಬಾರಿಸುವ ಎಚ್ಚರಿಸುವ ಕಾಯಕವನ್ನು ಬಹಳ ವಿಶೇಷವಾಗಿ ಮಾಡಿದರು. ಅಮ್ಮಸಂದ್ರದ ಹರ್ಡಲ್ ಬರ್ಗ್ ಸಿಮೆಂಟ್ ಕಂಪನಿ ಕಳೆದ ಮೂರುವರೆ ವರ್ಷಗಳಿಂದ ಸುಮಾರು ಒಂದು ಕೋಟಿ ನಲವತ್ತು ಲಕ್ಷಕ್ಕೂ ಹೆಚ್ಚು ಕಂದಾಯ ಬಾಕಿ ನೀಡಬೇಕು. ಹಾಗೆಯೇ ಬೆಸ್ಕಾಂ ನವರು ಸುಮಾರು ಹತ್ತು ವರ್ಷಗಳಿಂದ ಎಂಟು ಲಕ್ಷಕ್ಕೂ ಹೆಚ್ಚು ಕಂದಾಯ ಬಾಕಿ ಇದೆ ಎಂದು ಸದಸ್ಯ ಸಿದ್ದಲಿಂಗಯ್ಯ ಹೇಳಿದರು.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಮ್ಮಸಂದ್ರ, ಆದಿತ್ಯ ಪಟ್ಟಣ, ಡಿ.ಹೊಸಳ್ಳಿ, ಡಿ.ಹೊಸಳ್ಳಿ ಜನತಾ ಕಾಲೋನಿಗೆಲ್ಲಾ ಕಂದಾಯ ವಸೂಲಾತಿಗಾಗಿ ಆಂದೋಲನ ಮಾಡುವ ಸಲುವಾಗಿ ತಮಟೆ ಚಳುವಳಿ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಮೆಂಟ್ ಕಾರ್ಖಾನೆಯವರು ಮತ್ತು ಬೆಸ್ಕಾಂ ನವರು ಹೆಚ್ಚು ಕಂದಾಯ ಬಾಕಿ ಉಳಿಸಿಕೊಂಡಿರುವುದರಿಂದ ಅಲ್ಲಿ ಹೆಚ್ಚು ಕಾಲ ತಮಟೆ ಬಾರಿಸಿ ಕಂದಾಯ ಕಟ್ಟುವಂತೆ ಮನದಟ್ಟು ಮಾಡುತ್ತಿರುವುದಾಗಿ ಸಿದ್ದಗಂಗಯ್ಯ ಹೇಳಿದರು.ಈ ಎರಡು ಸಂಸ್ಥೆಗಳಿಂದ ಹೆಚ್ಚು ಕಂದಾಯ ಬಾಕಿ ಇದೆ. ಅದು ಬಿಟ್ಟರೆ ಇಡೀ ಗ್ರಾಮಸ್ಥರಿಂದ ಕೇವಲ 8 ಲಕ್ಷ ಕಂದಾಯ ಬಾಕಿ ಇದೆ. ಗ್ರಾಮಸ್ಥರನ್ನು ಕಂದಾಯ ಕೊಡಿ ಎಂದು ಕೇಳಿದರೆ ದೊಡ್ಡ ದೊಡ್ಡವರಿಂದ ಲಕ್ಷಾಂತರ ರುಪಾಯಿ ಬಾಕಿ ಇದೆ ಅದನ್ನು ವಸೂಲು ಮಾಡದೇ ನಮ್ಮ ಹತ್ರ ಬಂದಿದ್ದೀರ ಎಂದು ಜನರು ಆಕ್ಷೇಪಿಸುತ್ತಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಹೇಳಿದರು.
ಈ ಕೊನೆಯ ಎಚ್ಚರಿಕೆಯನ್ನು ಸಿಮೆಂಟ್ ಕಾರ್ಖಾನೆಯವರು ಮತ್ತು ಬೆಸ್ಕಾಂ ರವರು ಗಂಭೀರವಾಗಿ ಸ್ವೀಕರಿಸಿ ಕಂದಾಯವನ್ನು ಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಅಂತಿಮವಾಗಿ ನಾವು ಜಪ್ತಿಗೆ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಗಂಗಾಧರ್ ಎಚ್ಚರಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪಲ್ಲವಿ ಸದಸ್ಯರಾದ ಶಿವರಾಜು, ಸರೋಜಮ್ಮ, ವರಲಕ್ಷ್ಮೀ, ಪವಿತ್ರ, ಸಿದ್ದಗಂಗಮ್ಮ, ಪದ್ಮರೋಹಿತ್, ಗಂಗಯ್ಯ, ಉಮೇಶ್, ಕಾರ್ಯದರ್ಶಿ ರಾಜಣ್ಣ, ಬಿಲ್ ಕಲೆಕ್ಟರ್ ಗುರುಮೂರ್ತಿ, ಸಿಬ್ಬಂದಿಗಳಾದ ಶೋಭಾ, ಆಶ್ವಿನಿ, ಲೈಬ್ರರಿಯನ್ ಗಂಗಾಮಣಿ ಸೇರಿದಂತೆ ಹತ್ತಾರು ವಾಟರ್ ಮ್ಯಾನ್ ಗಳು ಇದ್ದರು.