ಕಠಾರಿ ಕದಿರೇನಹಳ್ಳಿ ಗ್ರಾಮದ ಅಶ್ವತ್ ಬಿನ್ ನಾರಾಯಣಪ್ಪ ಅವರು ಇ ಖಾತೆಯಲ್ಲಿ ತಂದೆ ಹೆಸರು ತಪ್ಪಾಗಿ ನಮೂದಾಗಿದ್ದು, ತಿದ್ದುಪಡಿ ಮಾಡಲು ಅರ್ಜಿಸಲ್ಲಿಸಿದ್ದರು.

ಇ ಖಾತೆಯಲ್ಲಿ ತಂದೆ ಹೆಸರು ತಿದ್ದುಪಡಿ ಮಾಡಲು 10,000 ರು.ಗೆ ಬೇಡಿಕೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅರ್ಜಿದಾರರ ಇ ಖಾತೆಯಲ್ಲಿ ತಂದೆ ಹೆಸರು ತಪ್ಪಾಗಿ ನಮೂದಾಗಿದ್ದು, ತಿದ್ದುಪಡಿ ಮಾಡಲು 10,000 ರು.ಗೆ ಬೇಡಿಕೆ ಇಟ್ಟು 9,500 ರು.ಗಳನ್ನು ನೀರುಗಂಟಿಯ ಪೋನ್ ಪೇ ಮೂಲಕ ಪಡೆದ ಗ್ರಾಮ ಪಂಚಾಯಿತಿ ಕರವಸೂಲಿಗಾರ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ದ್ಯಾವಪ್ಪ. ಸಿ. ಲೋಕಾಯುಕ್ತ ಬಲೆಗೆ ಬಿದ್ದಿರುವ ಕರವಸೂಲಿಗಾರ. ಅರ್ಜಿದಾರರಾದ ತಾಲೂಕಿನ ಕಠಾರಿ ಕದಿರೇನಹಳ್ಳಿ ಗ್ರಾಮದ ಅಶ್ವತ್ ಬಿನ್ ನಾರಾಯಣಪ್ಪ ಅವರು ಇ ಖಾತೆಯಲ್ಲಿ ತಂದೆ ಹೆಸರು ತಪ್ಪಾಗಿ ನಮೂದಾಗಿದ್ದು, ತಿದ್ದುಪಡಿ ಮಾಡಲು ಅರ್ಜಿಸಲ್ಲಿಸಿದ್ದರು. ಅಶ್ವತ್ ರನ್ನು ಸಂಪರ್ಕಿಸಿದ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಕರವಸೂಲಿಗಾರ ದ್ಯಾವಪ್ಪ. ಸಿ. 10,000 ರು.ಗಳನ್ನು ನೀಡಿದಲ್ಲಿ ತಪ್ಪಾಗಿ ನಮೂದಾಗಿರುವ ತಮ್ಮ ತಂದೆಯ ಹೆಸರನ್ನು ತಿದ್ದುಪಡಿ ಮಾಡಿ ಸರಿ ಪಡಿಸಿ ಕೊಡುವುದಾಗಿ ಬೇಡಿಕೆ ಇಟ್ಟಿದ್ದಾರೆ.

ಲೋಕಾಯುಕ್ತರನ್ನು ಭೇಟಿ ಮಾಡಿ ವಿಷಯ ತಿಳಿಸಿದ ಅಶ್ವತ್ ಶುಕ್ರವಾರ ಸಂಜೆ 4:30ರ ಸಮಯದಲ್ಲಿ ಈಗ 9500 ರು.ಗಳನ್ನು ಪೋನ್ ಪೇ ಮೂಲಕ ನೀಡುವುದಾಗಿ ತಿಳಿಸಿದಾಗ ನನಗೆ ಬೇಡ ನಮ್ಮ ವಾಟರ್ ಮೆನ್ ರಾಜಪ್ಪಗೆ ಕಳುಹಿಸಿ ಎಂದು ತಿಳಿಸಿದಾಗ , ಅಶ್ವತ್ ಅವರು 9500 ರು.ಗಳನ್ನು ಜಲಗಾರ ರಾಜಪ್ಪನ ಪೋನ್ ಪೇ ಗೆ ಕಳುಹಿಸಿದಾಗ, ಇದೇ ಸಮಯವನ್ನು ಕಾದಿದ್ದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶಿವರಾಜ್ ಕುಮಾರ್ ಮತ್ತು ತಂಡದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸಿಕೆಬಿ-7 ದ್ಯಾವಪ್ಪ. ಸಿ.