ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ನಿರ್ಧಾರ ಕೇವಲ ಏಕ ವ್ಯಕ್ತಿಯ ತೀರ್ಮಾನವಾಗಿದೆ. ಗ್ರಾಪಂ ಜನಪ್ರತಿನಿಧಿಗಳ ಅನುಮೋದನೆ ಆಗಿಲ್ಲ.

ಕನ್ನಡ ಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿ ಗ್ರಾಪಂ ಉಳಿವು ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ತಾಲೂಕಿನ ಗೆಜ್ಜಲಗೆರೆ ಹೊರವಲಯದ ಖಾಸಗಿ ಹೋಟೆಲ್ ಬಳಿ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಮುಖಂಡರ ನಿಯೋಗ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿ, ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ನಿರ್ಧಾರ ಕೇವಲ ಏಕ ವ್ಯಕ್ತಿಯ ತೀರ್ಮಾನವಾಗಿದೆ. ಗ್ರಾಪಂ ಜನಪ್ರತಿನಿಧಿಗಳ ಅನುಮೋದನೆ ಆಗಿಲ್ಲ ಎಂದು ಶಾಸಕ ಕೆ.ಎಂ.ಉದಯ್ ವಿರುದ್ಧ ಗಂಭೀರ ಆರೋಪ ಮಾಡಿದರು.

ನಗರಸಭೆ ವ್ಯಾಪ್ತಿಗೆ ಗ್ರಾಪಂಗಳು ಸೇರ್ಪಡೆಯಿಂದ ಸರ್ಕಾರ ನರೇಗಾ ಯೋಜನೆ, ಗ್ರಾಮೀಣ ಕೃಪಾಂಕ, ತೆರಿಗೆ ಹೆಚ್ಚಳವಾಗಿ ರೈತನ ಬದುಕು ಬೀದಿಗೆ ಬೀಳಲಿದೆ. ಗ್ರಾಪಂಗೆ ತೆರಿಗೆ ರೂಪದಲ್ಲಿ ಬರುವ ಆದಾಯಕ್ಕೂ ಕತ್ತರಿ ಬಿಡಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಶಾಸಕರು ನಮ್ಮ ಹೋರಾಟಕ್ಕೆ ಕಿಚ್ಚೆತ್ತು ಬೆಲೆ ನೀಡಿಲ್ಲ. ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ. ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ರೂಪಿಸಿಸದೆ ಪರೋಕ್ಷವಾಗಿ ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸುತ್ತಿದ್ದಾರೆ ಎಂದುಸಚಿವರಿಗೆ ಶಾಸಕರ ವಿರುದ್ಧ ದೂರು ಹೇಳಿದರು.

ತಾವು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿ ನಗರಸಭೆಗೆ ಗ್ರಾಮಗಳ ಸೇರ್ಪಡೆ ಕೈಬಿಡುವಂತೆ ಒತ್ತಾಯಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಈ ವೇಳೆ ರೈತ ಸಂಘದ ಮುಖಂಡ ವೀರಪ್ಪ, ಜಿ,ಎಂ .ಯೋಗೇಶ್, ಚಂದ್ರಶೇಖರ್ ಮತ್ತಿತರರು ಇದ್ದರು.