ಸಾರಾಂಶ
ಕೆಂಪುಕಲ್ಲು ಹಾಗೂ ಮರಳು ಸರಬರಾಜಿನಲ್ಲಿ ವ್ಯತ್ಯಯವುಂಟಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಕಾರಣಕ್ಕೆ ಕೆಂಪು ಕಲ್ಲು ಮತ್ತು ಮರಳಿಗೆ ವಿಧಿಸಿದ ನಿರ್ಬಂಧ ಸಡಿಲಿಸಲು ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಬಡವರ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಅತ್ಯಗತ್ಯವಾದ ಕೆಂಪುಕಲ್ಲು ಹಾಗೂ ಮರಳು ಸರಬರಾಜಿನಲ್ಲಿ ವ್ಯತ್ಯಯವುಂಟಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಕಾರಣಕ್ಕೆ ಕೆಂಪು ಕಲ್ಲು ಮತ್ತು ಮರಳಿಗೆ ವಿಧಿಸಿದ ನಿರ್ಬಂಧ ಸಡಿಲಿಸಲು ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆ ಒತ್ತಾಯಿಸಿದೆ.ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯಿತು.ಮಳೆ ಹಾನಿಯಿಂದ ಮನೆ ಕಳೆದುಕೊಂಡವರು ಮನೆ ನಿರ್ಮಿಸಲು ಕಲ್ಲು , ಮರಳು ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರಾಗಿದ್ದವರು ಇದೀಗ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಸರ್ಕಾರದ ನೀತಿ ಜನ ಸಾಮಾನ್ಯರ ಹಿತ ಕಾಯುವಂತಾಗಿರಬೇಕೇ ವಿನಃ ಸತಾಯಿಸುವಂತಿರಬಾರದೆಬ ಅಭಿಪ್ರಾಯ ವ್ಯಕ್ತವಾಯಿತು. ಪಂಚಾಯಿತಿ ವತಿಯಿಂದ ಕೈಗೊಂಡ ಮರದ ತೆರವು ಕಾರ್ಯಾಚರಣೆಯಲ್ಲಿ ಹಲವೆಡೆ ಆವರಣಗೋಡೆಗೆ ಹಾನಿಯನ್ನುಂಟು ಮಾಡಲಾಗಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬಂದಿದೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಅದರ ಮಾಲಿಕರೇ ತೆರವುಗೊಳಿಸಲು ವಿನಂತಿಸಲಾಗಿತ್ತು. ಅಪಾಯಕಾರಿ ಮರ ಮತ್ತು ಮರದ ಗೆಲ್ಲುಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಧರ್ಭದ ಸೊತ್ತು ಹಾನಿಗೆ ಪಂಚಾಯಿತಿ ಹೊಣೆಯಲ್ಲ ಎಂದರು. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ ನಟ್ಟಿಬೈಲ್, ಕೆ ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು ಟಿ ತೌಷಿಫ್, ಲೋಕೇಶ್ ಬೆತ್ತೋಡಿ , ಅಬ್ದುಲ್ ರಶೀದ್ ಪಿ.. ವಿನಾಯಕ ಪೈ, ಜಯಂತಿ, ಇಬ್ರಾಹಿಂ. ರುಕ್ಮಿಣಿ, ನೆಬಿಸಾ, ಶೋಭಾ, ಉಷಾ ಇದ್ದರು. ಪಿ.ಡಿ.ಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸರ್ಕಾರಿ ಸುತ್ತೋಲೆ ಮಂಡಿಸಿದರು.