ಸರ್ಕಾರ, ಜನರ ಮಧ್ಯೆ ಗ್ರಾಪಂ ಸೇತುವೆ ಇದ್ದಂತೆ: ಸಂಸದೆ ಪ್ರಭಾ

| Published : Apr 11 2025, 12:31 AM IST

ಸಾರಾಂಶ

ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗಕ್ಕೆ, ಗ್ರಾಮೀಣರಿಗೆ ತಲುಪಿಸುವ ಕೆಲಸ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಸಮರ್ಪಕವಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಕರೆ ನೀಡಿದರು.

ಗ್ರಾಮೀಣ ಸೌಲಭ್ಯಕ್ಕೆ ಕರೆ । ಹನುಮನಹಳ್ಳಿ ರೈಲ್ವೆ ಪ್ಲಾಟ್‌ ಫಾರಂಗೆ ಗ್ರಾಮಸ್ಥರ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗಕ್ಕೆ, ಗ್ರಾಮೀಣರಿಗೆ ತಲುಪಿಸುವ ಕೆಲಸ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಸಮರ್ಪಕವಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಕರೆ ನೀಡಿದರು.

ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕುರ್ಕಿ ಗ್ರಾಪಂನ ಗ್ರಂಥಾಲಯ, ಅರಿವು ಕೇಂದ್ರ, ಕುರ್ಕಿಯಲ್ಲಿ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಸರ್ಕಾರ ಮತ್ತು ಸದಸ್ಯರ ಮಧ್ಯೆ ಸೇತುವೆಯಾಗಿ, ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಕುರ್ಕಿ ಗ್ರಾಪಂ ಮಾದರಿಯಾಗಿದ್ದು, ಸತತ 2ನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿ ಪಡೆದಿದ್ದು ಪ್ರಶಂಸನೀಯವಾಗಿದೆ. ಗ್ರಾಪಂ ಎಲ್ಲಾ ಗ್ರಾಮಗಳಿಗೂ ಮಾದರಿಯಾಗಿದ್ದು, ಇಲ್ಲಿನ ಪಿಡಿಒ ಮನೆ ಮನೆಗೆ ತೆರಳಿ, ಅವಶ್ಯಕತೆಗಳ ಪಟ್ಟಿ ಮಾಡಿ, ಗ್ರಾಮಸಭೆ ಮಾಡಿ ಅಗತ್ಯ ಸೌಲಭ್ಯ ಒದಗಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಒಗ್ಗಟ್ಟು ಇದೆ ಎಂದು ಶ್ಲಾಘಿಸಿದರು.

ಗ್ರಾಮಸ್ಥರ ಸಹಕಾರದಿಂದ ಇಡೀ ಗ್ರಾಪಂನಲ್ಲಿ ಕುಟುಂಬದ ವಾತಾವರಣ ಇದೆ. ಕಸ ವಿಲೇವಾರಿ, ಗ್ರಂಥಾಲಯ, ಗ್ರಾಮ ಮಟ್ಟದ ಸಭೆಗಳು ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಗ್ರಂಥಾಲಯಗಳು ಪ್ರತಿ ಗ್ರಾಮದಲ್ಲೂ ಇರಬೇಕು. ಡಿಜಿಟಲ್ ಗ್ರಂಥಾಲಯವಿದ್ದರೆ ಗ್ರಾಮದ ವಿದ್ಯಾರ್ಥಿ, ಯುವ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಆನ್‌ಲೈನ್ ಪರೀಕ್ಷೆ ತೆಗೆದುಕೊಳ್ಳಲು ಸಹ ಡಿಜಿಟಲ್ ಗ್ರಂಥಾಲಯವಿದ್ದರೆ ಅನುಕೂಲ. ಗ್ರಂಥಾಲಯವೆಂದರೆ ಪುಸ್ತಕ ಇಡುವುದಷ್ಟೇ ಅಲ್ಲ, ಅದನ್ನು ಓದಿ, ಸದ್ಭಳಕೆ ಮಾಡಿಕೊಳ್ಳಬೇಕು. ಮೊಬೈಲ್ ವೀಕ್ಷಣೆ ಸಾಧ್ಯವಾದಷ್ಟೂ ಕಡಿಮೆ ಮಾಡಿ, ನಿಗದಿತ ಸಮಯದಲ್ಲಿ ಮಾತ್ರ ಮೊಬೈಲ್ ಬಳಸಬೇಕು ಎಂದರು.

ಮಕ್ಕಳಿಗೆ ಪುಸ್ತಕದ ವ್ಯಾಮೋಹ ಬೆಳೆಸಬೇಕು, ಆರೋಗ್ಯದತ್ತಲೂ ಗಮನಹರಿಸಬೇಕು. ಗ್ರಾಮದ ಗ್ರಂಥಾಲಯಗಳಲ್ಲಿ ಸಾಕಷ್ಟು ಪುಸ್ತಕಗಳಿರುತ್ತವೆ. ಕೃಷಿ, ಆಧ್ಯಾತ್ಮ, ಆರೋಗ್ಯ, ಸಾಧಕರ ಪುಸ್ತಕಗಳಿವೆ. ಅವುಗಳನ್ನು ಓದಿ ವಿಚಾರಗಳನ್ನು ತಿಳಿದುಕೊಳ್ಳಬೇಕು, ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬರುವ ಅನುದಾನದಲ್ಲಿ ಗ್ರಾಮೀಣ ಭಾಗದಲ್ಲಿ ಒಳ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಬೇಕಿದೆ. ಆದರೆ, ಈಚೆಗೆ ಹೊಸ ನಿಯಮ ಜಾರಿಗೆ ಬಂದಿದೆ. ಕೇವಲ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಸಂಪರ್ಕ ಕಲ್ಪಿಸಬೇಕು. ಹಳೇ ರಸ್ತೆಗಳ ಅಭಿವೃದ್ಧಿ ಸಾಧ್ಯವಿಲ್ಲದಂತಹ ಹೊಸ ನಿಯಮವಿದೆ .ಆದ್ದರಿಂದ ನಿಯಮ ತಿದ್ದುಪಡಿಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.

ಕೃಷಿ, ಹೈನುಗಾರಿಕೆಯಿಂದ ಸಾಕಷ್ಟು ಆದಾಯ ಬರುತ್ತದೆ. ಗ್ರಾಮಸ್ಥರು ಕೋಲ್ಡ್ ಸ್ಟೊರೇಜ್ ಅಳವಡಿಸಲು ಹಾಗೂ ಹಾಲಿನ ಡೈರಿ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ಹನುಮನಹಳ್ಳಿ ಗ್ರಾಮಸ್ಥರು ರೈಲ್ವೆ ಪ್ಲಾಟ್ ಫಾರಂ ವಿಸ್ತರಣೆಗೆ ಸಂಸದರಲ್ಲಿ ಮನವಿ ಮಾಡಿದರು.

ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ತಾಪಂ ಇಒ ರಾಮ ಭೋವಿ, ಗ್ರಾಪಂ ಅಧ್ಯಕ್ಷೆ ಕೆ.ಜಿ ನಾಗಮ್ಮ, ಉಪಾಧ್ಯಕ್ಷ ಕೆ.ಎಂ.ನಿಂಗಪ್ಪ, ಇಇ ಟಾಟಾ ಶಿವನ್, ಡಾ.ಮಹೇಶ, ಕೆ.ಎನ್.ಶಿವಮೂರ್ತಿ ಹಾಗೂ ಗ್ರಾಮಸ್ಥರಿದ್ದರು.