ಇಂದಿನಿಂದ ಅಳ್ನಾವರದಲ್ಲಿ ಗ್ರಾಮದೇವಿ ಜಾತ್ರೆ

| Published : Apr 18 2024, 02:23 AM IST

ಸಾರಾಂಶ

ಏ. 18ರಿಂದ ಅಳ್ನಾವರದ ಆರಾಧ್ಯ ದೇವಿಯರಾದ ಶ್ರೀ ಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗುತ್ತಿದೆ.

ಅಳ್ನಾವರ: ಏ. 18ರಿಂದ ಆರಂಭವಾಗಲಿರುವ ಇಲ್ಲಿನ ಜನರ ಆರಾಧ್ಯ ದೇವಿಯರಾದ ಶ್ರೀ ಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವಕ್ಕಾಗಿ ಪೂರ್ವ ಸಿದ್ಧತೆ ಭರದಿಂದ ಸಾಗಿದೆ.

೧೩ ಎಕರೆ ವಿಶಾಲವಾದ ಪ್ರದೇಶದಲ್ಲಿ ದೇವಿಯರು ವಿರಾಜಮಾನರಾಗಲು ಬೃಹತ್ ವೇದಿಕೆ ನಿರ್ಮಾಣವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ತೊಂದರೆ ಆಗದ ಹಾಗೆ ನಿಗಾ ವಹಿಸಲಾಗಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.

ಇಲ್ಲಿಯ ಎಪಿಎಂಸಿ ಆವರಣದಲ್ಲಿ ಶಾಮಿಯಾನಾ ಸೆಟ್‌ ಹಾಕಲಾಗಿದ್ದು, ದೇವಲೋಕದಂತೆ ಕಂಗೊಳಿಸುತ್ತಿದೆ. ದೇವಿಯರ ಆರಾಧನೆ ಜತೆಗೆ ಮನರಂಜನೆಗಾಗಿ ವಿವಿಧ ಆಟಿಗೆ ಸಾಮಗ್ರಿಗಳು ಲಗ್ಗೆ ಇಟ್ಟಿವೆ. ೩೦೦ಕ್ಕೂ ಅಧಿಕ ಅಂಗಡಿಗಳನ್ನು ಸಾಲು ಸಾಲಾಗಿ ನಿರ್ಮಿಸಲಾಗಿದೆ. ವಿವಿಧ ವಿಭಾಗದಲ್ಲಿ ಅಂಗಡಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಹಂಚಲಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಆಕರ್ಷಿಸುತ್ತಿದೆ.

ಇತಿಹಾಸ: ಇಲ್ಲಿನ ಜನರು ತಮ್ಮ ಕಷ್ಟ, ಸುಖ ಹಾಗೂ ಇಷ್ಟಾರ್ಥ ಪೂರೈಕೆಗಾಗಿ ಗ್ರಾಮದೇವಿಯರ ಮೊರೆ ಹೋಗುವುದು ವಾಡಿಕೆ. ಭಕ್ತಿಯಿಂದ ಬೇಡಿ ಶ್ರದ್ಧೆಯಿಂದ ತಮ್ಮ ಕರ್ಮಗಳನ್ನು ಪಾಲಿಸಿದವರಿಗೆ ದೇವಿಯು ಶಾಂತ ಸ್ವರೂಪಿಣಿಯಾಗಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ. ದೇವಿಯು ಪವಾಡಗಳ ಮೂಲಕ ಭಕ್ತರ ಬದುಕಿಗೆ ಸ್ಫೂರ್ತಿ ತುಂಬುತ್ತಾಳೆ ಎಂಬ ಬಲವಾದ ಮತ್ತು ಅಚಲ ವಿಶ್ವಾಸ ಜನರಲ್ಲಿದೆ.

೧೮ನೇ ಶತಮಾನದಿಂದ ಈ ಜಾತ್ರೆ ನಡೆಯುತ್ತ ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ೧೯೩೫ರಲ್ಲಿ ಗಂಗೂಬಾಯಿ ಪಾಟೀಲ್ ಅವರ ಮನೆತನದ ವಂಶಸ್ಥರಿಂದ ಈ ದೇವಿಯರ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿತು. ಖಾನಾಪುರದ ಚಿತ್ರಕಲಾ ಮನೆತನದ ವಂಶಸ್ಥರು ಸುಂದರ ದೈವಿ ಕಳೆಯುಳ್ಳ ಮೂರ್ತಿ ಕೆತ್ತನೆ ಮಾಡಿದರು. ಅಂದಿನಿಂದ ಇವತ್ತಿನವರೆಗೂ ಜಾತ್ರಾ ಮಹೋತ್ಸವದಲ್ಲಿ ಅದೇ ವಂಶಸ್ಥರಿಂದಲೇ ನಡೆಯುತ್ತಾ ಸಾಗಿದೆ.

ಸದ್ಯ ೧೨ ವರ್ಷಗಳಿಗೊಮ್ಮೆ ಜಾತ್ರೆ ಮಾಡಬೇಕೆಂದು ಹಿರಿಯರು ನಿರ್ಣಯಿಸಿ , ಈ ವರ್ಷ ೨೦೨೪ರಲ್ಲಿ ಏಪ್ರಿಲ್ ೧೮ರಿಂದ ೨೮ರ ವರೆಗೆ ಜಾತ್ರೆ ಉತ್ಸವಕ್ಕೆ ಕರೆಕೊಟ್ಟಿದ್ದಾರೆ. ಈ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ನಡೆಯಲು ಧರ್ಮದರ್ಶಿ ಭರತ್ ಪಾಟೀಲ್ ಹಾಗೂ ಜಾತ್ರಾ ಸಮಿತಿ ಸದಸ್ಯರು ಹಗಳಿರುಳು ಶ್ರಮಿಸುತ್ತಿದ್ದಾರೆ.

ಬಾಸಿಂಗ: ದೇವಿಯರಿಗೆ ಹಣೆಗೆ ಕಟ್ಟಲಾಗುವ ಬಾಸಿಂಗ ತಯಾರಿಕೆ ಪೂರ್ಣಗೊಂಡಿದ್ದು, ಅಕ್ಷತಾರೋಹಣ ಸಮಯದಲ್ಲಿ ಶ್ರೀಲಕ್ಷ್ಮೀ ದೇವಿ, ದುರ್ಗಾದೇವಿಯರ ಮುಡಿಗೇರಲಿವೆ.