ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮ ಸಂಪನ್ನಗೊಂಡಿತು. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರ ಆಧ್ಯಾತ್ಮಿಕ ಮನೋಭಿಲಾಷೆಗಳನ್ನು ಈಡೇರಿಸಿದ ಕಲ್ಪತರು ದಿನದಂದು, ಕಲ್ಪತರು ಉತ್ಸವದ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಅಂಗವಾಗಿ ದೀನ್‌ರಾಜ್ ಕಳವಾರು ನೇತೃತ್ವದಲ್ಲಿ 400ಕ್ಕೂ ಹೆಚ್ಚಿನ ಮಕ್ಕಳಿಂದ ಮಂಗಳಾದೇವಿ ವೃತ್ತದಿಂದ ರಾಮಕೃಷ್ಣ ಮಠದವರೆಗೆ ಕುಣಿತ- ಭಜನೆಯೊಂದಿಗೆ ಭವ್ಯ ಭಜನಾ ಶೋಭಾಯಾತ್ರೆ ನಡೆಯಿತು. 500ಕ್ಕೂ ಅಧಿಕ ಭಕ್ತರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.ಮಂಗಳಾದೇವಿ ವೃತ್ತದಿಂದ ಆರಂಭಗೊಂಡ ಭಜನಾ ಶೋಭಾಯಾತ್ರೆಯು ಮಂಗಳಾದೇವಿ ರಥಬೀದಿಯ ಮೂಲಕ ಸಾಗಿ ಮಂಗಳಾದೇವಿ ದೇವಸ್ಥಾನದ ಮುಂಭಾಗವಾಗಿ ರಾಮಕೃಷ್ಣ ಮಠವನ್ನು ಪ್ರವೇಶಿಸಿತು. ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂಭಾಗದಲ್ಲಿ ಮಕ್ಕಳು ಕುಣಿತ ಭಜನೆಯ ವಿಶೇಷ ಪ್ರದರ್ಶನ ನೀಡಿದರು. ಈ ಸಂದರ್ಭ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹಾಗೂ ಆಹ್ವಾನಿತ ಅತಿಥಿಗಳು ಮಕ್ಕಳೊಂದಿಗೆ ಕುಣಿತ ಭಜನೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.ಭಜನಾ ಶೋಭಾಯಾತ್ರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಚಾಲನೆ ನೀಡಿದರು.
ಭಜನ್ ಸಂಧ್ಯಾ ಉದ್ಘಾಟನೆ:ನಂತರ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಭಜನ್ ಸಂಧ್ಯಾ ಕಾರ್ಯಕ್ರಮವನ್ನು ಹೆಸರಾಂತ ಶಾಸ್ತ್ರೀಯ ಸಂಗೀತಗಾರ ವಿದ್ಯಾಭೂಷಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ. ಜೀವರಾಜ್ ಸೊರಕೆ, ಎಂಆರ್‌ಪಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಹೆಚ್.ವಿ. ಪ್ರಸಾದ್, ಕ್ಯಾ. ಗಣೇಶ್‌ಕಾರ್ಣಿಕ್ ಭಾಗವಹಿಸಿದ್ದರು.
ವಿದ್ಯಾಭೂಷಣರಿಂದ ಗಾನಸುಧೆ:ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾಭೂಷಣ ಅವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು. ಮಂಗಳೂರು ರಾಮಕೃಷ್ಣ ಮಠದ ಭಕ್ತರು, ಸ್ವಯಂ ಸೇವಕರು, ಮಕ್ಕಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.