ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪುಸ್ತಕ ಓದಿನಿಂದ ನಮ್ಮ ಸಾಹಿತ್ಯ ಪರಂಪರೆ ಬೆಳೆಸಲು ಸಾಧ್ಯ ಎಂದು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಹಾಗೂ ಸಾಹಿತಿ ಅಬ್ದುಲ್ ರಶೀದ್‌ತಿಳಿಸಿದರು.ನಗರದ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗವು ನವಕರ್ನಾಟಕ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿರುವ ಬೃಹತ್ ಪುಸ್ತಕ ಪ್ರದರ್ಶನದಲ್ಲಿ ಬೇದ್ರೆ ಮಂಜುನಾಥ್‌ಅವರ ‘ಡೂಡಲ್‌ಗೂಗಲ್‌ಅಂಕಲ್ ಜೊತೆ ಮಾತುಕತೆ’ ಹಾಗೂ ಪ್ರೊ.ಬಿ.ಎಸ್. ಜೈಪ್ರಕಾಶ್, ಪ್ರೊ.ಆರ್. ವೇಣುಗೋಪಾಲ್ ರಚಿಸಿದ ‘ಪಂಚಭೂತಗಳಲ್ಲಿ ರಾಸಾಯನಿಕ ವೈವಿಧ್ಯ’ ಎಂಬ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಭಾಷೆ ನಮ್ಮ ಮನಸ್ಸಿನ ಅನಿಸಿಕೆ ಹೇಳಲು ಇರುವ ಮಾಧ್ಯಮ. ಅದರ ಬಗ್ಗೆ ಗರ್ವ, ಅಹಂಕಾರ ಸಲ್ಲ. ಅದರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಭಾವನಾತ್ಮಕವಾದಾಗ ಉಳಿದವರ ಬಗ್ಗೆ ತಾತ್ಸಾರ ಭಾವನೆ ಮೂಡುವುದು ಸಹಜ. ಆದರೆ, ಪುಸ್ತಕದ ಓದು ನಮ್ಮನ್ನು ಗಡಿಯೊಳಗಿನ ಸಂಕುಚಿತತೆ ಮೀರಿ ಬೆಳೆಸುತ್ತದೆ. ಪುಸ್ತಕದ ಓದು ಪ್ರಪಂಚದ ಮೂಲೆ, ಮೂಲೆಯ ಬದುಕನ್ನು ತಿಳಿಸುತ್ತದೆ. ಅದರ ಮೂಲಕ ನಾವು ವಿಶ್ವಮಾನವರಾಗಲು ಸಾಧ್ಯ ಎಂದು ಅವರು ಹೇಳಿದರು.ನಾನು, ನನ್ನದು ಎಂಬ ಅಹಂಕಾರದ ಬದಲು ನಾವು ಎನ್ನುವ ವಿನಯ ಪ್ರಜ್ಞೆ ಮೂಡಲು ಪ್ರಪಂಚದೊಂದಿಗೆ ಒಂದಾಗಬೇಕು. ಮನಸ್ಸಿನಲ್ಲಿ ಪಾರದರ್ಶಕತೆಯಿದ್ದಾಗ ಎಲ್ಲವನ್ನು, ಎಲ್ಲರನ್ನೂ ಸ್ವೀಕರಿಸಲು ಸಾಧ್ಯ. ನಾವು ಬೆಟ್ಟದ ಮೇಲೆ ಬೀಸುವ ಗಾಳಿಯಂತಿರಬೇಕು ಎಂದರು.
ಪುಸ್ತಕಗಳನ್ನು ಓದುವುದರ ಜೊತೆಗೆ ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡಷ್ಟು ಹೆಚ್ಚು ಜ್ಞಾನವಂತರು, ವಿನಯವಂತರೂ ಆಗುತ್ತಾರೆ. ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರ ಸ್ಥಿತಿಗತಿಗಳ ಬಗ್ಗೆ ಅರಿತುಕೊಳ್ಳಬೇಕು. ಗಡಿಭಾಗದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷದ ಬಗ್ಗೆ ತಿಳಿದುಕೊಳ್ಳಬೇಕು. ಭವಿಷ್ಯದ ಪರೀಕ್ಷೆಗಳಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸುಲಭವಾಗುತ್ತದೆ ಎಂದು ಅವರು ತಿಳಿಸಿದರು.ಪ್ರಪಂಚದ ಪ್ರತಿಯೊಂದು ಅಣುವಿನಿಂದ ಹಿಡಿದು ಪುರಾಣದಲ್ಲಿ ಬರುವ ಬೃಹತ್ ಶರೀರದ ಪ್ರಾಣಿಯೂ ನಮ್ಮವು ಎಂಬ ಭಾವನೆ ನಮಗೆ ಬರಬೇಕೆಂದರೇ, ನಾವು ತೊಟ್ಟ ವೇಷಗಳನ್ನು ಕಳಚಿಟ್ಟು, ಪ್ರಪಂಚದ ಸೃಷ್ಟಿಗಳಲ್ಲಿ ನಾವು ಕೂಡ ಒಂದು ಎಂಬ ವಿನಯ ಪ್ರಜ್ಞೆ, ಮಾನವ ಪ್ರಜ್ಞೆ ಬೆಳೆಯಬೇಕು. ಇದಕ್ಕೆ ನಾವೆಲ್ಲರೂ ಪ್ರಪಂಚದಲ್ಲಿ ಒಂದಾಗಬೇಕು, ಬೆರೆಯಬೇಕು ಎಂದರು.
ಈ ಪುಸ್ತಕ ಮೇಳವನ್ನು ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್‌ಫಾ. ಡಾ. ಲೂರ್ದ್‌ಪ್ರಸಾದ್‌ಜೋಸೆಫ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಡಾನ್ಹಾ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ಎನ್.ಕೆ. ಸತ್ಯನಾರಾಯಣ, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಎ.ಟಿ. ಸದೆಬೋಸ್, ಸಂಚಾಲಕರಾದ ಮೇರಿ ನಿವೇದಿತಾ, ಡಾ.ಎಸ್. ಶಿವರಾಜು ಇದ್ದರು.----
ಬಾಕ್ಸ್...3 ದಿನಗಳ ಪುಸ್ತಕ ಪ್ರದರ್ಶನ
ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಯೋಜಿಸಲಾಗಿರುವ 3 ದಿನಗಳ (ಫೆ.6 ರವರೆಗೆ) ಬೃಹತ್ ಪುಸ್ತಕ ಪ್ರದರ್ಶನವು ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದೆ.ಈ ಪ್ರದರ್ಶನದಲ್ಲಿ ಕನ್ನಡ, ಇಂಗ್ಲೀಷ್ ಹಿರಿಯ ಹಾಗೂ ಹೊಸ ಲೇಖಕರ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಕಾದಂಬರಿ, ಕಥೆ, ಜೀವನಚರಿತ್ರೆ, ಧಾರ್ಮಿಕ ಚಿಂತನೆ, ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿ ನೀಡುವ ಪುಸ್ತಕಗಳಿವೆ. ವಿದ್ಯಾರ್ಥಿಗಳಿಗೆ ಶೇ.15 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿದೆ.