ಸಾರಾಂಶ
ದಾಸೀಹಳ್ಳಿ ಗ್ರಾಮದಲ್ಲಿ ಆಚರಣೆ । ಚಾಮರ ಸೇವೆ ಸಲ್ಲಿಕೆ । ಸಾವಿರಾರು ಭಕ್ತರು ಭಾಗಿ । ವಿದ್ಯುತ್ ಹೂವಿನ ದೀಪಗಳ ಅಲಂಕಾರ
ಕನ್ನಡಪ್ರಭ ವಾರ್ತೆ ಅರಸೀಕೆರೆತಾಲೂಕಿನ ಕಸಬಾ ಹೋಬಳಿ ದಾಸೀಹಳ್ಳಿ ಗ್ರಾಮದ ಶ್ರೀ ರಾಜರಾಜೇಶ್ವರಿ, ಹುತ್ತದಮ್ಮ ದೇವಿಯರ ಮಹಾ ರಥೋತ್ಸವ ಮತ್ತು ಚಾಮರ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಂಜೃಭಣೆಯಿಂದ ನೆರವೇರಿತು.
ದಾಸೀಹಳ್ಳಿ ಗ್ರಾಮದಲ್ಲಿ ದೇವಿಯವರ ಮದುವಣಿಗೆ ಶಾಸ್ತ್ರ, ಶ್ರೀ ದೇವಿಯವರ ಬಾನ, ಕನ್ನಡಿ ಕಳಶೋತ್ಸವ ಸೇವೆ, ಪುಣ್ಯಾರ್ಚನೆ, ಗಂಗಾಸ್ಥಾನ ಪೂಜಾ, ವಿದ್ಯುತ್ ಹೂವಿನ ದೀಪಗಳಿಂದ ಮಂಟಪೋತ್ಸವ ಹೀಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.ಜಾತ್ರಾ ಮಹೋತ್ಸವಕ್ಕೆ ಅಮ್ಮನಹಟ್ಟಿಯ ಗಂಗಾಮಾಳಿಮ್ಮ ದೇವಿ, ಹೊಸಪಟ್ಟಣದ ಅಂತರಘಟ್ಟಮ್ಮ ದೇವಿ ಹಾಗೂ ದೂತರಾಯ ಸ್ವಾಮಿಯವರ ಆಗಮನದೊಂದಿಗೆ 11.30 .ರಿಂದ 12.30 ರೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಅಲಂಕೃತ ರಥದಲ್ಲಿ ಶ್ರೀ ರಾಜರಾಜೇಶ್ವರಿ, ಹುತ್ತದಮ್ಮ ದೇವಿಯರನ್ನು ಪ್ರತಿಷ್ಠಾಪಿಸಿ ಗ್ರಾಮದ ದೂತರಾಯ ಸ್ವಾಮಿ, ಚೆಲುವರಾಯ ಸ್ವಾಮಿಯರು ಪೂಜೆ ಸಲ್ಲಿಸಿ ರಥದ ಗಾಲಿಗೆ ತೆಂಗಿನಕಾಯಿಯನ್ನು ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ದೇವಿ ನಾಮಸ್ಮರಣೆ ಮಾಡುತ್ತ ಹರ್ಷೋದ್ಗಾರದೊಂದಿಗೆ ರಥದ ಕಳಸಕ್ಕೆ ಬಾಳೆಹಣ್ಣು, ದವನ ಎಸೆದು ಸಂಭ್ರಮಿಸಿದರು.ಶ್ರೀ ಹುತ್ತದಮ್ಮ ದೇವಿ, ಚೌಡಮ್ಮ ದೇವಿ , ಗಂಗಾಮಾಳಮ್ಮ ದೇವಿ ಹಾಗೂ ಹೊಸಪಟ್ಟಣದ ಅಮ್ಮನವರಿಗೆ ಸ್ವರ್ಣರಂಜಿತ ಆಭರಣ ಹಾಗೂ ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದು ಭಕ್ತಾದಿಗಳಿಗೆ ವಿಶೇಷ ಆಕರ್ಷಣೀಯವಾಗಿತ್ತು. ಭಕ್ತರು ದೇವಿಯರ ದರ್ಶನ ಮಾಡಿ ಪುನೀತರಾದರು. ದಾಸೀಹಳ್ಳಿ ಹಾಗೂ ಹೊಸಪಟ್ಟಣ ದೂತರಾಯ ಸ್ವಾಮಿ, ಚೆಲುವರಾಯ ಸ್ವಾಮಿಯ ಕುಣಿತವು ನೋಡುಗರ ಮನಸೂರೆಗೊಂಡಿತು.
ರಥೋತ್ಸವದ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೂತರಾಯ ಸ್ವಾಮಿಯ ಅದ್ಧೂರಿ ಮಣೆವು ಕಾರ್ಯಕ್ರಮ ಹಾಗೂ ಓಕಳಿ ಸೇವೆ ನೆರವೇರಿತು. ಈ ಸಂಧರ್ಭದಲ್ಲಿ ದಾಸೀಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು, ಗ್ರಾಮಸ್ಥರು ಹಾಗೂ ಶ್ರೀ ಹುತ್ತದಮ್ಮ ದೇವಿ ಕ್ಷೇತ್ರಾಭಿವೃದ್ದಿ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.