ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರಸ್ವಾಮಿ ಅದ್ಧೂರಿ ರಥೋತ್ಸವದ ಪ್ರಯುಕ್ತ ಸೆ.26ರವರೆಗೆ 18ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಶ್ರೀವೀರಭದ್ರೇಶ್ವರಸ್ವಾಮಿ ಸೇವಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಎನ್.ನಟರಾಜ್ ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದ ಅಂಗವಾಗಿ ಸೆ.9ರಂದು ವಿಶೇಷ ಪೂಜೆಯೊಂದಿಗೆ ಕಂಬ ಹಾಕುವ ಮೂಲಕ ಹೆತ್ತಗೋನಹಳ್ಳಿ ಭದ್ರೇಗೌಡರ ಕುಟುಂಬಸ್ಥರ ಸೇವಾರ್ಥದಲ್ಲಿ ಧ್ವಜಾರೋಹಣ ನೆರವೇರಿಸಿ ಸೆ.10ರಂದು ಅನ್ನಸಂತರ್ಪಣೆ ಮಾಡಲಾಗಿದೆ ಎಂದರು.
ಸೆ.12ರಂದು ಗ್ರಾಮದ ಗುಂಡಾ ಭಕ್ತರಿಂದ ಮಂದಹಾಸ ಉತ್ಸವ ನಡೆಯಿತು. ಸೆ.13ರಂದು ಚಿಕ್ಕವೀರನಕೊಪ್ಪಲು ಗ್ರಾಮಸ್ಥರಿಂದ ಶೇಷವಾಹನೋತ್ಸವ ಜರುಗಿತು. ಸೆ.14ರಂದು ಭದ್ರೇಗೌಡನಕೊಪ್ಪಲು ಗ್ರಾಮಸ್ಥರಿಂದ ಭೂತವಾಹನೋತ್ಸವ, ಸೆ.15ರಂದು ಕಸುವಿನಹಳ್ಳಿ ಗ್ರಾಮಸ್ಥರಿಂದ ಬಸವ ವಾಹನೋತ್ಸವ, ಸೆ.16ರಂದು ದಂ.ಜಕ್ಕನಹಳ್ಳಿ ಗ್ರಾಮಸ್ಥರಿಂದ ನಂದಿವಾಹನೋತ್ಸವ, ಸೆ.17ರಂದು ಲಕ್ಕಿಬೋರಣ್ಣ ವಂಶಸ್ಥರಿಂದ ಹುಲಿವಾಹನೋತ್ಸವ, ಸೆ.18ರಂದು ಪಾಲಗ್ರಹಾರ ಗ್ರಾಮಸ್ಥರಿಂದ ನಂದಿ ವಾಹನೋತ್ಸವ, ಸೆ.19ರಂದು ಜೋಡಿನೇರಕೆರೆ ಗ್ರಾಮಸ್ಥರಿಂದ ನವಿಲು ವಾಹನೋತ್ಸವ, ಸೆ.20ರಂದು ಬೆಟ್ಟದಮಲ್ಲೇನಹಳ್ಳಿ ಗ್ರಾಮಸ್ಥರಿಂದ ತ್ರಿಪುರ ಸಂವಾಹ ಲೀಲೋತ್ಸವ. ಸೆ.21ರಂದು ದಕ್ಷಬ್ರಹ್ಮ ಸಂಹಾರ. ಸೆ.22ರಂದು ಪುಣ್ಯಹೋಮ ಹಾಗೂ ಸೆ.23ರಂದು ವೈಭವದ ರಥೋತ್ಸವ ನಡೆಯಲಿದೆ. ನಂತರ ಅದೇ ದಿನ ರಾತ್ರಿ ಅಗ್ನಿ ಕೊಂಡೋತ್ಸವ ನಡೆಯಲಿದೆ ಎಂದರು.ಸೆ.24ರಂದು ಭಕ್ತಾದಿಗಳಿಂದ ವಿವಿಧ ಬಗೆಯ ಸೇವೆಗಳು ನಡೆಯುತ್ತವೆ. ಸೆ.25ರಂದು ಆನೆವಾಹನೋತ್ಸವ ಮತ್ತು ಕಂಕಣ ವಿಸರ್ಜನೆ ಮತ್ತು ಸೆ.26ರಂದು ತೀರ್ಥ ಸ್ನಾನದ ಮೂಲಕ 18ದಿನಗಳ ರಥೋತ್ಸವಕ್ಕೆ ವಿದ್ಯುಕ್ತ ತೆರೆಬೀಳಲಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲಾ ಉತ್ಸವಗಳ ಮೆರವಣಿಗೆ ನಡೆಯುತ್ತದೆ. ಸುತ್ತಮುತ್ತಲ ಹಲವು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೂ ಸಹ ಪಾಲ್ಗೊಳ್ಳಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ನಾಗರಾಜು, ಖಜಾಂಚಿ ಕೆ.ರುದ್ರೇಶ್, ಟ್ರಸ್ಟಿಗಳಾದ ಜೆ.ಎಸ್.ರಾಜಶೇಖರ್ ಮತ್ತು ಎಂ.ಕುಮಾರ ಇದ್ದರು.ಸೆ.18 ರಿಂದ ಭಾರತೀ ಉತ್ಸವ: ಮಹಾದೇವಸ್ವಾಮಿ
ಕೆ.ಎಂ.ದೊಡ್ಡಿ: ಭಾರತಿ ಕಾಲೇಜು ಆವರಣದಲ್ಲಿ ಸೆ.18ರಿಂದ ಮೂರು ದಿನಗಳ ಕಾಲ ಭಾರತೀ ಉತ್ಸವವನ್ನು ಹಮ್ಮಿಕೊಂಡಿರುವುದಾಗಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮಹಾದೇವಸ್ವಾಮಿ ತಿಳಿಸಿದರು.ಭಾರತಿ ಕಾಲೇಜು ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.18, 19 ಹಾಗೂ 20ರಂದು ಭಾರತೀ ಉತ್ಸವ ಜರುಗಲಿದೆ. ಇದರ ಅಂಗವಾಗಿ ಸೆ.15ರ ಬೆಳಗ್ಗೆ 9 ಗಂಟೆಗೆ ಮದ್ದೂರು ಪಟ್ಟಣದ ಸರ್ಕಾರಿ ಕ್ರೀಡಾಂಗಣದಿಂದ ಭಾರತಿ ಕಾಲೇಜಿನ ಭಾರತಿ ಕ್ರೀಡಾಂಗಣದವರೆಗೆ ವಾಕಥಾನ್ ನಡೆಯಲಿದೆ ಎಂದರು.
ವಾಕಾಥಾನ್‌ಗೆ ವಿಧಾನ ಪರಿಷತ್ ಸದಸ್ಯ ಹಾಗೂ ಸಂಸ್ಥೆ ಚೇರ‍್ಮನ್ ಮಧು ಜಿ.ಮಾದೇಗೌಡ ಚಾಲನೆ ನೀಡುವರು. ಭಾರತೀ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ನೌಕರರು, ಸಿಬ್ಬಂದಿ ಸೇರಿ ಸುಮಾರು 3 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.