ಸಾರಾಂಶ
ಚಳ್ಳಕೆರೆ: ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಬುಡಕಟ್ಟು ಯಾದವ ಸಮುದಾಯದ ಆರಾಧ್ಯದೈವ ಕೇತೆ ದೇವರ ಜಾತ್ರೆ ಸಂಭ್ರಮ ಸಡಗರಗಳಿಂದ ಸೋಮವಾರ ನಡೆಯಿತು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಕೇತೆದೇವರ ಕೃಪೆಗೆ ಪಾತ್ರರಾದರು. ತಾಲೂಕಿನ ಪರಶುರಾಮಪುರ ಹೋಬಳಿ ಪರ‍್ಲಹಳ್ಳಿ ಗ್ರಾಮದಲ್ಲಿ ಪರ‍್ಲಹಳ್ಳಿ ಗ್ರಾಮದ ವಸಲುದಿನ್ನೆಯಲ್ಲಿ ಕಳೆದ 12 ದಿನಗಳಿಂದ ಈ ಜಾತ್ರೆ ನಡೆಯುತ್ತಿದ್ದು, ಮುಳ್ಳಿನಿಂದ ನಿರ್ಮಿಸಲಾದ ಗುಡಿಯ ಮೇಲೆ ಸ್ಥಾಪಿಸಿದ ಕಳಸವನ್ನು ಇಳಿಸುವ ಮೂಲಕ ಜಾತ್ರೆಗೆ ತೆರೆಬಿದ್ದಿತು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಹ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್ಪಿ ರಾಜಣ್ಣ, ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ನೇತೃತ್ವದಲ್ಲಿ ಪರಶುರಾಮಪುರ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.ಜಾನಪದ ಹಿನ್ನೆಲೆಯುಳ್ಳ ಬುಡಕಟ್ಟು ಸಮುದಾಯಗಳು ಇಂದಿಗೂ ಸಹ ತಮ್ಮದೇಯಾದ ವಿಶೇಷ ಪದ್ಧತಿಯಲ್ಲಿ ದೇವರ ಉತ್ಸವಗಳನ್ನು ಆಚರಿಸಿಕೊಂಡು ಬಂದಿವೆ.
ಹಿರಿಯರು ಆಚರಿಸಿದ ಸಂಪ್ರದಾಯ, ಪರಂಪರೆಯಂತೆ ಪೂಜಾ ಪದ್ಧತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಜಾತ್ರೆಗೆ ಚಳ್ಳಕೆರೆ ತಾಲೂಕು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಕಾಡುಗೊಲ್ಲರ ಬೊಮ್ಮನಗೌಡರು, ಕೋಣನಗೌಡರು, 13 ಗುಡಿಕಟ್ಟಿನ ಅಣ್ಣ ತಮ್ಮಂದಿರು ಭಾಗವಹಿಸಿ ಜಾತ್ರೆ ಆಚರಣೆ ಮಾಡುವುದು ವಿಶೇಷ.ಈ ಜಾತ್ರೆಗೆ ಲಕ್ಷಾಂತರ ಸಂಖ್ಯೆ ಭಕ್ತರು ಹಾಜರಿದ್ದು, ತಮ್ಮ ಆರಾಧ್ಯ ದೈವಕ್ಕೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಕೇತೇ ದೇವರು, ಬತುವಿನ ದೇವರು, ಈರಣ್ಣ, ಸಿರಿಯಣ್ಣ ಕೋಣತಮ್ಮಣ್ಣ, ಬಾಲದೇವರು ಮುಂತಾದ ದೇವರುಗಳನ್ನು ಅಲಂಕೃತಗೊಳಿಸಿ ಬುಡಕಟ್ಟು ಸಮುದಾಯದವರೇ ನಿರ್ಮಿಸಿದ ಮುಳ್ಳಿನ ಗುಡಿಯಲ್ಲಿಟ್ಟು ಭಕ್ತಿಯಿಂದ ಸೇವೆ ಸಮರ್ಪಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಯಾದವ ಸಮುದಾಯದ ಬಹುತೇಕ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು, ಕಳಸ ಕೀಳುವ ಸಂದರ್ಭವನ್ನು ನೋಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ಬಾರಿ ಮುಳ್ಳಿನ ಗುಡಿ ಮೇಲಿದ್ದ ಕಳಸ ದ್ವಾರಣ ಗುಂಟೆಯ ರಾಜು ಕಳಸ ಕಿತ್ತ ಪ್ರಥಮ ವ್ಯಕ್ತಿಯಾಗಿ ಹೊರಹೊಮ್ಮಿದರು. ಇವರನ್ನು ಗ್ರಾಮವೂ ಸೇರಿದಂತೆ ಸಮುದಾಯದ ಮುಖಂಡರು ಸನ್ಮಾನಿಸಿದರು.ಶಾಸಕ ಟಿ.ರಘುಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ರಾಮಪ್ಪ, ಕಾಡುಗೊಲ್ಲ ರಾಜ್ಯಾಧ್ಯಕ್ಷ ರಾಜಣ್ಣ, ಮೀಸೆಮಹಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಬಾಲರಾಜು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ರವಿಕುಮಾರ್, ಪರಶುಪರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಟಿ.ಮಹಲಿಂಗಪ್ಪ, ಮಿಸೆಮಹಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.