ಶಾಸಕ ಪ್ರಭು ಚವ್ಹಾಣ್‌, ಖೂಬಾ ಮಾತಿನ ಸಮರ, ಬಿ.ವೈ ವಿಜಯೇಂದ್ರ ಕಿಡಿಕಿಡಿ

| Published : Jan 30 2024, 02:04 AM IST

ಸಾರಾಂಶ

ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮಾಜಿ ಸಚಿವ, ಶಾಸಕ ಪ್ರಭು ಚ‍ವ್ಹಾಣ್‌ ಅವರಿಬ್ಬರ ಮಧ್ಯದ ಬಹು ವರ್ಷಗಳ ತಿಕ್ಕಾಟ ಬೃಹತ್‌ ವೇದಿಕೆಯಲ್ಲಿ ಮತ್ತೊಮ್ಮೆ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೇಸರಗೊಂಡು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮಾಜಿ ಸಚಿವ, ಶಾಸಕ ಪ್ರಭು ಚ‍ವ್ಹಾಣ್‌ ಅವರಿಬ್ಬರ ಮಧ್ಯದ ಬಹು ವರ್ಷಗಳ ತಿಕ್ಕಾಟ ಬೃಹತ್‌ ವೇದಿಕೆಯಲ್ಲಿ ಮತ್ತೊಮ್ಮೆ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೇಸರಗೊಂಡು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಶಾಸಕ ಪ್ರಭು ಚವ್ಹಾಣ್‌ ಅವರು, ಕೇಂದ್ರ ಸಚಿವ ಹಾಲಿ ಸಂಸದ ಭಗವಂತ ಖೂಬಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಉತ್ತಮ ವ್ಯಕ್ತಿಗೆ ಟಿಕೆಟ್‌ ನೀಡುವಂತೆ ಮನವಿಸಿದ ಘಟನೆ ನಡೆಯಿತು. ನಂತರ ಭಾಷಣಕ್ಕಿಳಿದ ಖೂಬಾ, ಅನೇಪಿಕ್ಷತವಾಗಿ ಮಾತನಾಡುವವರಿಗೆ ವರಿಷ್ಠರು ಸೂಕ್ತ ಸಮಯದಲ್ಲಿ ಇಂಜಕ್ಷನ್‌ ನೀಡ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಈ ಇಬ್ಬರ ಭಾಷಣದ ನಂತರ ಮಾತನಾಡಿದ ಬಿ.ವೈ ವಿಜಯೇಂದ್ರ ಅವರು, ವೇದಿಕೆ ಮೇಲೆ ಕುಳಿತಿರುವ ಮುಖಂಡರು ಕಾರ್ಯಕರ್ತರ ಬೆಲೆ ಏನೆಂಬುವದನ್ನು ಮರೆತ್ತಿದ್ದಾರೆ. ಕಾರ್ಯಕರ್ತರು ಗೌರವ ಕೊಟ್ಟು ವೇದಿಕೆ‌ ಮೇಲೆ‌ ಕುಳ್ಳರಿಸಿದ್ದಾರೆ ಅಂದ್ರೆ ಅದನ್ನು ಮರೆಯಬಾರದು ಎಂದರು.

ಇಲ್ಲಿನ ಮುಖಂಡರಿಗೆ ಅನಿಸಿರಬಹುದು ನಾನು ಚುನಾಯಿತ ಪ್ರತಿನಿಧಿ ಆದ ಮೇಲೆಯೇ ಬಿಜೆಪಿ ಹುಟ್ಟಿದೆ, ತಮ್ಮಿಂದಲೇ ಬಿಜೆಪಿ ಎಂದು ಆದರೆ ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪ ಐದು ಬಾರಿ ಸಂಸದರಾಗಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದರು ಎಂಬುವದನ್ನು ಯಾರೂ ಮರೆಯಬಾರದು ಎಂದು ಸೂಚಿಸಿದರು.

ನಾನು ಇಲ್ಲಿಗೆ ಬಂದಿರೋ ವಿಷಯವೇ ಬೇರೆ, ಮುಖಂಡರು ಮಾಡುವ ಕೆಲಸವೇ ಬೇರೆ. ಇವತ್ತು ಬೇಡ ಅಂದ್ರು ಮುಖಂಡರು ಕೇಳಲಿಲ್ಲ. ಬೀದರ್ ಜಿಲ್ಲೆಯ ಸುದ್ದಿನೇ 45 ಗಂಟೆ ಓಡೋದು ಎಂದು ಪ್ರಭು ಚವ್ಹಾಣ್‌ ಅವರ ಸಾಷ್ಟಾಂಗ ನಮಸ್ಕಾರ, ಖೂಬಾ ಅವರ ತೀಕ್ಷ ಮಾತಿನ ಕುರಿತಾಗಿ ಬೇಸರದಿಂದ ನುಡಿದ ಘಟನೆ ನಡೆಯಿತು.