ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ರಾಜಶೇಖರ ಕೋಟಿ: ಗಣ್ಯರ ಸ್ಮರಣೆ

| Published : Jan 30 2024, 02:04 AM IST

ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ರಾಜಶೇಖರ ಕೋಟಿ: ಗಣ್ಯರ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಕೋಟಿಯವರು ವೈಯಕ್ತಿಕವಾಗಿ ಪರಿಚಯವಿರಲಿಲ್ಲ. ಒಮ್ಮೆ ಕ್ರೀಡಾ ಪಂದ್ಯಾವಳಿಯಲ್ಲಿ ಅವರಿಂದ ರನ್ನರ್ ಅಪ್ ಬಹುಮಾನ ಸ್ವೀಕರಿಸಿದ್ದೆ. ಆದರೆ, ಪತ್ರಿಕೆಯ ಮೂಲಕ ಅವರ ವ್ಯಕ್ತಿತ್ವ ನನಗೆ ಗೊತ್ತಿತ್ತು ಎನ್ನುತ್ತಾರೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ. ಇತ್ತ ಕೋಟಿಯವರು ಕೆ.ಜಿ.ಕೊಪ್ಪಲಿನಲ್ಲಿಯೇ ಮೊದಲು ಪತ್ರಿಕಾ ಕಚೇರಿ ಆರಂಭಿಸಿದ್ದರು. ನಾನು ಕೂಡ ಅದೇ ಊರಿನವನು. ಹೀಗಾಗಿ ಚಿಕ್ಕಂದಿನಿಂದಲೂ ಪರಿಚಿತರು. ಯಾವಾಗಲೂ ಕೂಡ ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಿದ್ದರು ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ರಾಜಶೇಖರ ಕೋಟಿಯವರು ಎಂದು ಗಣ್ಯರು ಶ್ಲಾಘಿಸಿದರು.

ಮೈಸೂರು ವಿವಿ ಸಂಜೆ ಕಾಲೇಜಿನ ಎದುರು ಸೋಮವಾರ ನಡೆದ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ಆಂದೋಲನ ಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿಯವರ ಸ್ಮರಣಾರ್ಥ ಹೊರತಂದಿರುವ ಆರನೇ ವರ್ಷದ ಕ್ಯಾಲೆಂಡರ್ ಬಿಡುಗಡೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ಕೋಟಿಯವರು ಸರಳ, ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು ಸ್ಮರಿಸಿಕೊಂಡರು.

ಕ್ಯಾಲೆಂಡರ್ ಬಿಡುಗಡೆ ಮಾಡಿದ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನನಗೆ ಕೋಟಿಯವರು ವೈಯಕ್ತಿಕವಾಗಿ ಪರಿಚಯವಿರಲಿಲ್ಲ. ಒಮ್ಮೆ ಕ್ರೀಡಾ ಪಂದ್ಯಾವಳಿಯಲ್ಲಿ ಅವರಿಂದ ರನ್ನರ್ ಅಪ್ ಬಹುಮಾನ ಸ್ವೀಕರಿಸಿದ್ದೆ. ಆದರೆ ಪತ್ರಿಕೆಯ ಮೂಲಕ ಅವರ ವ್ಯಕ್ತಿತ್ವ ನನಗೆ ಗೊತ್ತಿತ್ತು ಎಂದರು.

ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಕೋಟಿಯವರು ಕೆ.ಜಿ. ಕೊಪ್ಪಲಿನಲ್ಲಿಯೇ ಮೊದಲು ಪತ್ರಿಕಾ ಕಚೇರಿ ಆರಂಭಿಸಿದ್ದರು. ನಾನು ಕೂಡ ಅದೇ ಊರಿನವನು. ಹೀಗಾಗಿ ಚಿಕ್ಕಂದಿನಿಂದಲೂ ಪರಿಚಿತರು. ಯಾವಾಗಲೂ ಕೂಡ ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಿದ್ದರು ಎಂದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಕೋಟಿಯವರು ಕಾಡುಗಳ್ಳ ವೀರಪ್ಪನ್ ಕುರಿತ ವರದಿಗೆ ಸ್ವತಃ ತೆರಳಿ, ಮರುದಿನ ಪತ್ರಿಕೆಯಲ್ಲಿ ಸವಿವರವಾದ ವರದಿ ಪ್ರಕಟಿಸುತ್ತಿದ್ದರು. ತಾವು ಗಳಿಸಿದ್ದರಲ್ಲಿ ಶೇ.30 ಹೆಚ್ಚು ಹಣವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುತ್ತಿದ್ದರು. ಇದರಿಂದಾಗಿಯೇ ಬಸ್ ತಂಗುದಾಣಗಳು, ತರಕಾರಿ ಮಾರುಕಟ್ಟೆ, ಆಟೋರಿಕ್ಷಾ ಚಾಲಕರ ನಿಲ್ದಾಣಗಳಲ್ಲಿ ಇವತ್ತಿಗೂ ಅವರ ಫೋಟೋ ಹಾಕಿಕೊಂಡು ಶೋಷಿತ ವರ್ಗದ ಜನ ನೆನಪಿಸಿಕೊಳ್ಳುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಕೋಟಿ ಅವರನ್ನು ನಾನು ಮೈಸೂರಿನಲ್ಲಿ ಭೇಟಿಯಾಗಿರಲಿಲ್ಲ. ಶ್ರೀಲಂಕಾಗೆ ಪ್ರಬಂಧವೊಂದನ್ನು ಮಂಡಿಸಲು ಹೋಗಿದ್ದಾಗ ನಾನು ಉಳಿದುಕೊಂಡಿದ್ದ ಹೋಟೆಲ್ ನಲ್ಲಿಯೇ ಅವರು ಉಳಿದಿದ್ದರು. ಸೆಮಿನಾರ್ ಗೆ ಹೋಗುವ ಮುನ್ನ ಆಕಸ್ಮಿಕವಾಗಿ ಭೇಟಿಯಾದಾಗ ಅವರ ಬೆಳೆದು ಬಂದ ದಾರಿಯನ್ನು ವಿವರಿಸಿದರು. ನನ್ನ ಪ್ರಕಾರ ಅವರೊಬ್ಬ ಸರಳ ವ್ಯಕ್ತಿತ್ವವುಳ್ಶವರಾಗಿದ್ದರು ಎಂದರು.

ಕೋಟಿಯವರು ಭಾವಚಿತ್ರಕ್ಕೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಆಂದೋಲನ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಪುಷ್ಪಾರ್ಚನೆ ಮಾಡಿದರು. ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಮಾನಸ ಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ, ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಎಸ್. ಉಮೇಶ್, ವೇದಿಕೆಯ ಅಧ್ಯಕ್ಷ ಆರ್. ವಾಸುದೇವ ವಿಶೇಷ ಆಹ್ವಾನಿತರಾಗಿದ್ದರು.

ಇದೇ ಸಂದರ್ಭದಲ್ಲಿ ಸಾಧಕರಾದ ಪತ್ರಿಕಾ ಛಾಯಾಗ್ರಾಹಕರಾದ ಎಂ.ಎನ್. ಲಕ್ಷ್ಮಿನಾರಾಯಣ ಯಾದವ್, ಟಿ. ಅನೂಪ್ ರಾಘ್, ನಾಗೇಶ್ ಪಾಣತ್ತಲೆ, ಗವಿಮಠ ರವಿ, ಪತ್ರಕರ್ತರಾದ ನಜೀರ್ ಅಹ್ಮದ್, , ಎಂ.ಟಿ. ಯೋಗೇಶ್ ಕುಮಾರ್, ಪ್ರಾಧ್ಯಾಪಕರಾದ ಡಾ.ಎಂ.ಕೆ. ಗಿರೀಶ್ ಚಂದ್ರ, ಡಾ. ದಿವಾಕರ್ ಚಾಂಡಿ, ನರಸಿಂಹಮೂರ್ತಿ, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಜಗದೀಶ್ ಸ್ವಾಗತಿಸಿದರು. ಡಾ.ಬಿ.ಎಸ್. ದಿನಮಣಿ ನಿರೂಪಿಸಿದರು.

ವೇದಿಕೆಯ ಪದಾಧಿಕಾರಿಗಳಾದ ಭಾಸ್ಕರ್, ಎಸ್. ವಿನೋದ್, ಕೆ. ಗಣೇಶ್, ಎನ್. ಚಲುವೇಶ್, ಡಾ.ಎಚ್. ನವೀನಕುಮಾರ್, ಎನ್. ಮಧುಸೂದನ್, ಚಿದಾನಂದ, ಮಂಜುನಾಥ್, ಮಂಜುನಾಥ್ ಕೆ.ಗೌಡ, ಆರ್. ಹರೀಶ್, ಎಸ್. ರಿಷಿರಾಜ್, ಸುರೇಶ್, ಪ್ರದೀಪ್, ರೋಹಿತ್, ಶ್ರೇಯಸ್, ರವಿ, ಯೋಗೇಶ್. ಜಗದೀಶ್ ಇದ್ದರು.