ಗಣಪತಿ ಪೆಂಡಾಲ್‌ನಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಪ್ರತಿದಿನ ನಾನಾ ಕಲಾತಂಡಗಳ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು. ನವೆಂಬರ್ 20ರಂದು ಆರಂಭಗೊಂಡ ವಿಸರ್ಜನಾ ಮಹೋತ್ಸವದ ಮೊದಲ ದಿನ ಶ್ರೀ ಪ್ರಸನ್ನ ಗಣಪತಿಯನ್ನು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಮಂಟಪದಿಂದ ಹೊರತಂದು ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಸಲಾಯಿತು. ಅಂದು ರಾತ್ರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಮಧ್ಯರಾತ್ರಿ ಬಳಿಕ ನಡೆದ ಭರ್ಜರಿ ಮದ್ದುಗುಂಡುಗಳ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಐತಿಹಾಸಿಕ 85ನೇ ವರ್ಷದ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವವು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಿ ಭಾನುವಾರ ಅದ್ಧೂರಿಯಾಗಿ ಸಂಪನ್ನಗೊಂಡಿತು. ಈ ಬಾರಿಯ ಮಹೋತ್ಸವದಲ್ಲಿ ಎರಡು ಡಿಜೆಗಳ ಭರ್ಜರಿ ಸದ್ದು, ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ಆಕರ್ಷಕ ಮದ್ದುಗುಂಡುಗಳ ವೈಭವ ಜನರ ಗಮನ ಸೆಳೆಯಿತು.ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡಿದ್ದ ತಾಲೂಕಿನ ಆರಾಧ್ಯ ದೈವ ಶ್ರೀ ಪ್ರಸನ್ನ ಗಣಪತಿಗೆ ಪ್ರತಿದಿನ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳು ಹಾಗೂ ವಿವಿಧ ನೈವೇದ್ಯಗಳನ್ನು ಸಮರ್ಪಿಸುವ ಮೂಲಕ ಭಕ್ತಿಭಾವದಿಂದ ಪೂಜಿಸಲಾಯಿತು. ಗಣಪತಿ ಪ್ರತಿಷ್ಠಾಪನೆಗೊಂಡ ದಿನದಿಂದ ವಿಸರ್ಜನೆಯ ದಿನದ ತನಕ ಗಣಪತಿ ಪೆಂಡಾಲ್‌ನಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಪ್ರತಿದಿನ ನಾನಾ ಕಲಾತಂಡಗಳ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು. ನವೆಂಬರ್ 20ರಂದು ಆರಂಭಗೊಂಡ ವಿಸರ್ಜನಾ ಮಹೋತ್ಸವದ ಮೊದಲ ದಿನ ಶ್ರೀ ಪ್ರಸನ್ನ ಗಣಪತಿಯನ್ನು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಮಂಟಪದಿಂದ ಹೊರತಂದು ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಸಲಾಯಿತು. ಅಂದು ರಾತ್ರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಮಧ್ಯರಾತ್ರಿ ಬಳಿಕ ನಡೆದ ಭರ್ಜರಿ ಮದ್ದುಗುಂಡುಗಳ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸಿತು.ನವೆಂಬರ್‌ 21ರಂದು ಕಾಯಿ ಮಾರುಕಟ್ಟೆ ಪ್ರದೇಶದಿಂದ ಪುನರಾರಂಭಗೊಂಡ ಮೆರವಣಿಗೆಯಲ್ಲಿ ಎರಡು ಡಿಜೆಗಳ ಭರ್ಜರಿ ಸಂಗೀತದ ಅಬ್ಬರ ಯುವಜನತೆಯನ್ನು ಹುರುಪುಗೊಳಿಸಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಸಹ ಮೆರವಣಿಗೆಯಲ್ಲಿ ಭಾಗವಹಿಸಿ ಯುವಕರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.ಮೂರು ದಿನಗಳ ಸಂಭ್ರಮಕ್ಕೆ ಭಾನುವಾರ ತೆರೆ ಬಿದ್ದಿದ್ದು, ಶ್ರೀ ಪ್ರಸನ್ನ ಗಣಪತಿಯನ್ನು ಕಂತೇನಹಳ್ಳಿ ಕೆರೆಯಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು. ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ವಿವಿಧ ಮದ್ದುಗುಂಡುಗಳ ಪ್ರದರ್ಶನ ಆಕಾಶದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿ ನೆರೆದಿದ್ದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರ ಕಣ್ಮನ ಸೆಳೆಯಿತು.85 ವರ್ಷಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಶ್ರೀ ಪ್ರಸನ್ನ ಗಣಪತಿ ಮಹೋತ್ಸವವು ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ವೈಭವ ಹಾಗೂ ಜನರ ಒಗ್ಗಟ್ಟಿನ ಸಂಭ್ರಮಕ್ಕೆ ಸಾಕ್ಷಿಯಾಯಿತು. ಮೂರು ದಿನಗಳ ಕಾಲ ಅರಸೀಕೆರೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅದ್ಧೂರಿ ವಿಸರ್ಜನೆಯೊಂದಿಗೆ ಈ ವರ್ಷದ ಗಣಪತಿ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿತು.