ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಣ್ಣು, ನೀರು, ಗಾಳಿ, ಇಂಧನ ಹಾಳಾಗದಂತೆ ರಕ್ಷಣೆ ಮಾಡಲು ಜ.12, 13 ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.ಪಟ್ಟಣದ ಲೋಕಸಭಾ ಸದಸ್ಯ ಅಣ್ಣಾಸಾಹೇಬ್ ಜೊಲ್ಲೆ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿಯನ್ನು ಪ್ರತಿಯೊಬ್ಬರು ಮಾಡಬೇಕಾದ ಅವಶ್ಯಕತೆ ಇರುವುದರಿಂದ 2024ರ ಜ.12, 13 ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಪರಿವಾರ ಹಾಗೂ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಹಯೋಗದಲ್ಲಿ ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಎಂಬ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಮಠಗಳ ಮಠಾಧೀಶರು, ಧರ್ಮದರ್ಶಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ-ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವ ವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುಭಿಕ್ಷಾ ಆರ್ಗ್ಯಾನಿಕ್ ಸೊಸೈಟಿಯ ಅಧ್ಯಕ್ಷ ಆನಂದ ಆ. ಶ್ರೀ ಮಾತನಾಡಿ, ಸಾವಯವ ಕೃಷಿ ಪರಿವಾರ ಕಳೆದೆರಡು ದಶಕಗಳಿಂದ ರಾಜ್ಯದ 172 ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ನಿರ್ಲಕ್ಷ್ಯ, ಗೋವು ಸಾಕಾಣಿಕೆ ನಿರಾಕಣೆ ಮಾಡುತ್ತಿರುವ ಯುವ ಪೀಳಿಗೆಯನ್ನು ಎಚ್ಚರಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಬಂದಿದ್ದು, ಇದೀಗ ಕನ್ಹೇರಿ ಮಠದಲ್ಲಿಯ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಮಠಾಧೀಶರು, ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ನಂದೀಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಹರಪನಹಳ್ಳಿಯ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಯಾದಿಗಿರಿಯ ಗಿರಿಮಲ್ಲೇಶ್ವರ ಸ್ವಾಮೀಜಿ, ಮುಧೋಳದ ಶಂಕರಾರೂಢ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ, ಸುಭಿಕ್ಷಾ ಸೊಸೈಟಿಯ ಉಪಾಧ್ಯಕ್ಷ ಆರ್.ಟಿ.ಪಾಟೀಲ, ಸಾವಯವ ಕೃಷಿ ಪರಿವಾರದ ಅಧ್ಯಕ್ಷ ದತ್ತಾತ್ರೇಯ ಹೆಗಡೆ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಉಪಸ್ಥಿತರಿದ್ದರು.
ಕೋಟ್..ದೇಶದಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿಯ ಕುರಿತಾದ ಹಲವು ಪ್ರಾತ್ಯಕ್ಷಿಕೆಗಳನ್ನು ಮಾಡಲಾಗಿದ್ದು, ಇವುಗಳನ್ನು ಕೂಡ ವೀಕ್ಷಿಸಿ ಸಾವಯವ ಕೃಷಿ ಮಾಡಲು ಉತ್ತೇಜನ ಪಡೆದುಕೊಳ್ಳಬಹುದಾಗಿದೆ. ಎಲ್ಲ ಸಂಪ್ರದಾಯಗಳ ಸ್ವಾಮೀಜಿಗಳು, ಸಂತರು, ಶರಣರು ಭಾಗವಹಿಸಬಹುದಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಮಳಿಗೆ, ಸಾವಯವ ಕೃಷಿ ಪರಿಕರಗಳ ತಯಾರಿಕಾ ತರಬೇತಿ ಕೇಂದ್ರ ಮುಂತಾದವುಗಳನ್ನು ಕೂಡ ವೀಕ್ಷಣೆ ಮಾಡಬಹುದಾಗಿದೆ.
- ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠ.