ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ನರೇಗಾ ಯೊಜನೆ ಕಾಮಗಾರಿಯಿಂದ ೧೦೦ ದಿನಗಳ ಕೆಲಸ ನೀಡುತ್ತಿದ್ದು, ರಾಜ್ಯದಲ್ಲಿ ಭೀಕರ ಬರಗಾಲದಲ್ಲಿ ಇದನ್ನು ೧೫೦ ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ನಮ್ಮ ಸರ್ಕಾರವು ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂಧಿಸದೆ ಕೆಲಸ ಮಾಡಿರುವ ೧೦೦ ದಿನಗಳ ವೇತನದಲ್ಲಿಯೇ ಸುಮಾರು ೬೦೦ ಕೊಟಿ ಅನುದಾನವನ್ನು ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ತಾಲೂಕಿನ ಕದ್ದರಗಿ ಗ್ರಾಮದಲ್ಲಿ ಕದ್ದರಗಿ ಗ್ರಾಮದಿಂದ ಯರಗಲ್ ವರೆಗಿನ ರಸ್ತೆ ಕಾಮಗಾರಿಗೆ ₹೫೦ ಲಕ್ಷ ಮತ್ತು ಶಾಲಾ ಕಟ್ಟಡ ನಿರ್ಮಾಣಕ್ಕೆ ₹೧೩.೯೦ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರವು ಆಳುವ ಸರ್ಕಾರವಲ್ಲಾ ಜನರ ನೋವನ್ನು ಆಲಿಸುವ ಸರ್ಕಾರವಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಬದ್ಧರಾಗಿದ್ದು ಅದರಂತೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದರು.
ನಾವು ವಿಧಾನಸಭೆ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಯಂತೆ ೪ ಗ್ಯಾರಂಟಿ ಯೊಜನೆಗಳನ್ನು ಜಾರಿಗೆ ತಂದಿದ್ದು ಶಕ್ತಿ ಯೊಜನೆಯಡಿಯಲ್ಲಿ ನಿತ್ಯ ೬೦ ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೊತಿ ಯೊಜನೆಯಡಿಯಲ್ಲಿ ೧.೫೦ ಕೊಟಿ ಫಲಾನುಭವಿಗಳು ೨೦೦ ಯೂನಿಟ್ ಕರೆಂಟ್ ಫ್ರೀ ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೊಜನೆಯಡಿಯಲ್ಲಿ ೫ ಕೆ.ಜಿ ಅಕ್ಕಿ ನೀಡುವ ಯೊಜನೆಗೆ ಕೇಂದ್ರ ಅಕ್ಕಿ ನೀಡದೇ ಇರುವದರಿಂದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಬ್ ರೀಜನಲ್ ಸೆಂಟರ್‌ಗಳನ್ನು ಕಲಬುರಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಮುಂದಿನ ಏಪ್ರಿಲ್ ಒಳಗಾಗಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿದ್ದು, ತಾಲೂಕಿನ ಯಾವ ಗ್ರಾಮದಲ್ಲಿಯೂ ತೊಂದರೆ ಆಗದ ರೀತಿಯಲ್ಲಿ ತಾಲೂಕು ಆಡಳಿತ ಸಿದ್ಧರಾಗಿರಬೇಕು. ಇದರಲ್ಲಿ ಅಧಿಕಾರಿಗಳು ನಿರ್ಲಕ್ಷವನ್ನು ತೊರಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಮುಖಂಡರಾದ ಶಿವಾನಂದ ಪಾಟೀಲ್, ನಾಗರೆಡ್ಡಿ ಪಾಟೀಲ್ ಮಾತನಾಡಿದರು. ರಮೇಶ ಮರಗೋಳ, ಮೆಹಮೂದ ಸಾಹೇಬ ವಾಡಿ, ಅರವಿಂದ ಚವ್ವಾಣ, ಶರಣಬಸಪ್ಪ ಧನ್ನಾ, ಜಗದೀಶ ಚವ್ವಾಣ, ಜಗದೇವ ಕುಂಬಾರ, ಪ್ರದೀಪ ಪೂಜಾರಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.ಕೋಟ್..
ವಿಧಾನ ಸಭೆ ಚುನಾವಣೆಯಲ್ಲಿ ನನ್ನನ್ನು ಸೊಲಿಸಲು ಪ್ರದಾನಿ ನರೇಂದ್ರ ಮೊದಿಯವರು, ಮುಖ್ಯಮಂತ್ರಿ ಆದಿಯಾಗಿ ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಸರಣಿ ರ‍್ಯಾಲಿಗಳನ್ನು ಹಮ್ಮಿಕೊಂಡರು, ಬುಲ್ದೋಜರ್ ಬಾಬಾ ಅವರು ಬಂದು ರೌಡಿ ಶೀಟರ್ ವಿರುದ್ಧ ಪ್ರಚಾರ ಮಾಡಿ ಹೊದರು. ಅವರ ಯಾವ ಮ್ಯಾಜಿಕ್ ನಮ್ಮಲ್ಲಿ ನಡೆಯಲಿಲ್ಲಾ ಇದು ನಮ್ಮ ಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ.- ಪ್ರಿಯಾಂಕ್ ಖರ್ಗೆ, ಶಾಸಕ ಚಿತ್ತಾಪುರ