ಹಾಲಿನ ಸಂಗ್ರಹಣೆ ಸ್ಥಗಿತ ಖಂಡಿಸಿ ಪ್ರತಿಭಟನೆ

| Published : Dec 19 2023, 01:45 AM IST

ಹಾಲಿನ ಸಂಗ್ರಹಣೆ ಸ್ಥಗಿತ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲಿನ ದರ ನಿಗದಿಯಲ್ಲಿ ವ್ಯತ್ಯಾಸ ಆಗಿದ್ದನ್ನು ಸರಿಪಡಿಸಿದ್ದೇವೆ. ಆಡಳಿತ ಮಂಡಳಿಯವರು ಎರಡೂ ಕಡೆ ಹಾಲು ಸಂಗ್ರಹಿಸಲು ತೀರ್ಮಾನಿಸಿ ಸಮಸ್ಯೆ ಬಗೆಹರಿಸಿದ್ದಾರೆ

ಹೂವಿನಹಡಗಲಿ: ತಾಲೂಕಿನ ಇಟ್ಟಿಗಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯು ಹಾಲಿನ ಅಳತೆ ಹಾಗೂ ದರ ನಿಗದಿ ವಿಚಾರ ಪ್ರಶ್ನಿಸಿದ್ದಕ್ಕಾಗಿ ಹಾಲಿನ ಸಂಗ್ರಹಣೆ ಸ್ಥಗಿತಗೊಳಿಸಿದ್ದು, ಇದನ್ನು ವಿರೋಧಿಸಿ ಸದಸ್ಯರು ಹಾಲಿನ ಕೇಂದ್ರದ ಎದುರು ಪ್ರತಿಭಟಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲಿನ ಅಳತೆ, ದರ ನಿಗದಿಯಲ್ಲಿ ಕೆಲ ದಿನಗಳಿಂದ ಸಿಬ್ಬಂದಿ ವ್ಯತ್ಯಾಸ ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಏಕಾಏಕಿ ಹಾಲು ಸಂಗ್ರಹಣೆ ಸ್ಥಗಿತಗೊಳಿಸುವ ಮೂಲಕ

ಬೇರೆ ಕೇಂದ್ರಕ್ಕೆ ಹೋಗಿ ಎಂದು ಕಾರ್ಯದರ್ಶಿ ಹಾಲು ಹಾಕುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹಾಲು ಉತ್ಪಾದಕರು ದೂರಿದರು.

ಕಳೆದ 15 ವರ್ಷಗಳಿಂದ ಇಲ್ಲಿನ ಹಾಲಿನ ಕೇಂದ್ರಕ್ಕೆ ಹಾಲು ಹಾಕುತ್ತಿದ್ದೇವೆ. ಕೋಟೆ ಪ್ರದೇಶದಲ್ಲಿ ಇತ್ತೀಚೆಗೆ ಹಾಲು ಶೀಥಲೀಕರಣ ಕೇಂದ್ರ ಆರಂಭಿಸಿದ್ದು, ಹಾಲು ಶೇಖರಣೆ ಮಾಡಲಾಗುತ್ತಿದೆ. ಇಟ್ಟಿಗಿ ಡೈರಿ ವ್ಯಾಪ್ತಿಯ ಸದಸ್ಯರನ್ನು ಕೋಟೆಯ ಕೇಂದ್ರಕ್ಕೆ ಹೋಗಿ ಹಾಲು ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದೇ ಇದ್ದುದರಿಂದ ಹಾಲು ಉತ್ಪಾದಕರಿಗೆ ವಿನಾಕಾರಣ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಸದಸ್ಯರು ತಿಳಿಸಿದ್ದಾರೆ.

ಇಟ್ಟಿಗಿಯ ಹಾಲು ಉತ್ಪಾದಕರಿಗೆ ಕೋಟೆ ಹಾಲು ಸಂಗ್ರಹಣಾ ಕೇಂದ್ರ ದೂರವಾಗುತ್ತದೆ. ಮಾರ್ಗಮಧ್ಯೆ ಮಧ್ಯದ ಅಂಗಡಿಗಳಿರುವುದರಿಂದ ಮಹಿಳೆಯರು ಹಾಲಿನ ಕೇಂದ್ರಕ್ಕೆ ಹೋಗಲು ಹಿಂಜರಿಯುತ್ತಾರೆ. ಇಟ್ಟಿಗಿ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಅಳತೆ ಹಾಗೂ ದರ ನಿಗದಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಹಾಲಿನ ದರ ನಿಗದಿಯಲ್ಲಿ ವ್ಯತ್ಯಾಸ ಆಗಿದ್ದನ್ನು ಸರಿಪಡಿಸಿದ್ದೇವೆ. ಆಡಳಿತ ಮಂಡಳಿಯವರು ಎರಡೂ ಕಡೆ ಹಾಲು ಸಂಗ್ರಹಿಸಲು ತೀರ್ಮಾನಿಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಕೆಎಂಎಫ್ ವಿಸ್ತರಣಾಧಿಕಾರಿ ಗುರುಬಸವರಾಜ ತಿಳಿಸಿದರು.

ಬಿಸ್ಟನಗೌಡ್ರ ಸಿದ್ದನಗೌಡ, ಜಿ. ಮಲ್ಲಿಕಾರ್ಜುನ, ಹುಳ್ಳಿ ಬಸವರಾಜ, ಕೊಟ್ರಪ್ಪ, ಕ್ಯಾತ್ನ ಕೊಟ್ರೇಶ, ಕ್ಯಾತ್ನ ಮಲ್ಲಪ್ಪ, ವೃಷಬೇಂದ್ರ, ಕೆ. ರುದ್ರಜ್ಜ, ಕೆ. ಹೇಮಣ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.