ನಿಗಮ-ಮಂಡಳಿ ಪಟ್ಟಿಗೆ ಇಂದು ವರಿಷ್ಠರ ಒಪ್ಪಿಗೆ?

| Published : Dec 19 2023, 01:45 AM IST

ನಿಗಮ-ಮಂಡಳಿ ಪಟ್ಟಿಗೆ ಇಂದು ವರಿಷ್ಠರ ಒಪ್ಪಿಗೆ?
Share this Article
  • FB
  • TW
  • Linkdin
  • Email

ಸಾರಾಂಶ

ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ರಾಜ್ಯದಿಂದ ಅಖೈರುಗೊಳಿಸಿ ಕಳುಹಿಸಿರುವ ಪಟ್ಟಿಗೆ ಅಂಕಿತ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವರ ತಂಡ ಸೋಮವಾರ ಸಂಜೆಯೇ ದೆಹಲಿ ತಲುಪಿದ್ದು, ಮಂಗಳವಾರ ಹೈಕಮಾಂಡ್‌ ಜತೆ ಅಂತಿಮ ಹಂತದ ಚರ್ಚೆ ನಡೆಸಿದ ಬಳಿಕ ಪಟ್ಟಿಗೆ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ರಾಜ್ಯದಿಂದ ಅಖೈರುಗೊಳಿಸಿ ಕಳುಹಿಸಿರುವ ಪಟ್ಟಿಗೆ ಅಂಕಿತ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವರ ತಂಡ ಸೋಮವಾರ ಸಂಜೆಯೇ ದೆಹಲಿ ತಲುಪಿದ್ದು, ಮಂಗಳವಾರ ಹೈಕಮಾಂಡ್‌ ಜತೆ ಅಂತಿಮ ಹಂತದ ಚರ್ಚೆ ನಡೆಸಿದ ಬಳಿಕ ಪಟ್ಟಿಗೆ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಹೈಕಮಾಂಡ್‌ ಸಭೆಯಲ್ಲಿ ನಿಗಮ-ಮಂಡಳಿ ನೇಮಕದ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ.

ವಾಸ್ತವವಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ಬುಧವಾರದಿಂದ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಮುಂದಿನ ಒಂದೆರಡು ವಾರ ಲಭ್ಯರಿಲ್ಲ. ವಿದೇಶಕ್ಕೆ ತೆರಳುವ ಮುನ್ನ ನಿಗಮ-ಮಂಡಳಿ ಅಂತಿಮಗೊಳಿಸಬೇಕು ಎಂಬ ಕಾರಣಕ್ಕೆ ಮಂಗಳವಾರ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಂಗಳವಾರದ ಸಭೆಯ ನಂತರ ನಿರ್ಧಾರವೊಂದು ಹೊರಬೀಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ರಾಜ್ಯ ಉಸ್ತುವಾರಿ:

ಎಲ್ಲವೂ ನಿರೀಕ್ಷಿಸಿದಂತೆ ನಡೆದರೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮೊದಲೇ 39 ಮಂದಿ ನಿಗಮ-ಮಂಡಳಿ ಅಧ್ಯಕ್ಷರ ಅಂತಿಮ ಪಟ್ಟಿಯೂ ಬಿಡುಗಡೆಯಾಗಲಿದೆ. ನಿಗಮ-ಮಂಡಳಿ ನೇಮಕ ಪಟ್ಟಿಗೆ ಒಪ್ಪಿಗೆ ಪಡೆದೇ ಬರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯಿಂದ ಆಕಾಂಕ್ಷಿಗಳಲ್ಲಿ ಮತ್ತಷ್ಟು ವಿಶ್ವಾಸ ಮೂಡಿದೆ.ಹಲವು ತಿಂಗಳಿಂದ ಕಸರತ್ತು:ನಿಗಮ-ಮಂಡಳಿ ನೇಮಕಕ್ಕೆ ಹಲವು ತಿಂಗಳುಗಳಿಂದ ಕಸರತ್ತು ನಡೆಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಂತಿಮ ಹಂತದ ಪರಿಶೀಲನೆ ನಡೆಸಿ ನವೆಂಬರ್‌ ಕೊನೆಯ ವಾರದಲ್ಲೇ ರಾಜ್ಯದಿಂದ 39 ಮಂದಿ ಶಾಸಕರ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದರು.ಇದೀಗ ಪಂಚರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್‌ನಿಂದ ಬುಲಾವ್‌ ಬಂದಿದ್ದು, ಸೋಮವಾರ ಸಂಜೆ ರಾಜ್ಯ ನಾಯಕರು ದೆಹಲಿ ಸೇರಿಕೊಂಡಿದ್ದಾರೆ. ಇವರ ಜತೆ ಕೆಲ ಸಚಿವರೂ ಇದ್ದಾರೆ.