ಕಪ್ಪತ್ತಮಲ್ಲೇಶ್ವರ ನಂದಿವೇರಿಯಲ್ಲಿ ಅದ್ಧೂರಿ ಜಾತ್ರಾಮಹೋತ್ಸವ

| Published : Aug 30 2024, 01:06 AM IST

ಸಾರಾಂಶ

ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಯಿಂದ ಕಾರ್ಯಕ್ರಮ ನೆರವೇರಿಸಿದರು. ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು

ಡಂಬಳ: ಕಪ್ಪತ್ತಗುಡ್ಡದಲ್ಲಿ ನೆಲೆಸಿರುವ ನಂದಿವೇರಿ,ಕಪ್ಪತ್ತಮಲ್ಲೇಶ್ವರ ಜಾತ್ರಾ ಗುರುವಾರ ಅದ್ಧೂರಿಯಾಗಿ ನಡೆಯಿತು. ವಿವಿಧ ರಾಜ್ಯ, ಗ್ರಾಮಗಳಿಂದ ಬಂದ ಭಕ್ತರು ಕಪ್ಪತ್ತಮಲ್ಲೇಶ್ವರ, ಗಾಳಿಗುಂಡಿ ಬಸವಣ್ಣ, ನಂದಿವೇರಿಯ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಪ್ರದಾಯದಂತೆ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ಮತ್ತು ಬ್ರಹ್ಮಾಂಬಿಕಾ ದೇವಿಯ ವಿವಾಹ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಯಿಂದ ಕಾರ್ಯಕ್ರಮ ನೆರವೇರಿಸಿದರು. ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು.

ಕಪ್ಪತ್ತ ಗುಡ್ಡದಲ್ಲಿ ಬೃಹಂಗೇಶ್ವರ: ಕಪ್ಪತ್ತಮಲ್ಲೇಶ್ವರ ದೇವರ ಸನ್ನಿಧಾನದಲ್ಲಿ ಬೃಹಂಗೇಶ್ವರ ಇರುವುದು ವಿಶೇಷ. ಕಾಶಿಯಲ್ಲಿ ಬೃಹಂಗೇಶ್ವರ ಇರುವ ಕುರುವು ಬಿಟ್ಟರೆ, ಕಪ್ಪತ್ತಗುಡ್ಡದಲ್ಲಿ ಮಾತ್ರ ಕಾಣಿಸಿಗುತ್ತಾನೆ. ಬೃಹಂಗೇಶ್ವರ ಎಂದರೆ ಶಿವನ ಆರಾಧಕ. ಶಿವನ ನೆಚ್ಚಿನ ಭಕ್ತ. ಶಿವನಿಂದ ಆಶೀರ್ವಾದಕ್ಕೆ ಭಾಜನನಾಗಿ, ಶಿವನ ಅಧೀನದಲ್ಲಿ ಇದ್ದು, ಮಾಟ-ಮಂತ್ರಕ್ಕೆ ಒಳಾಗದವರನ್ನು ಸಂರಕ್ಷಿಸಿ, ಪಾಪದ ನಾಶ ಮಾಡಿ, ಸದ್ಗತಿ ಸಿಗುವಂತೆ ಮಾಡುವ ಶಕ್ತಿ ಬೃಹಂಗೇಶ್ವರನಲ್ಲಿ ಇದೆ ಎಂಬುದು ಭಕ್ತರ ನಂಬಿಕೆ.

ಗಾಳಿಗುಂಡಿ ಬಸವಣ್ಣ: ಜೋರಾಗಿ ಬೀಸುವ ಗಾಳಿಯಲ್ಲೂ ದೇವರ ಗುಡಿಗೆ ಸಾವಿರಾರು ಭಕ್ತರ ದಂಡು ತಂಡೋಪತಂಡವಾಗಿ ಆಗಮಿಸಿ ಬಸವಣ್ಣನ ವಿಗ್ರಹಕ್ಕೆ ಪೇರಲ ಹಣ್ಣು ಮತ್ತು ಬಾಳೆಹಣ್ಣು ಉಜ್ಜಿ, ಅಭಿಷೇಕ ನೆರವೇರಿಸುತ್ತಾರೆ. ಬಳಿಕ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಗುಡಿಯ ಎದುರಿಗೆ ಇರುವ ಗಿಡಕ್ಕೆ ಕಟ್ಟಿರುವ ತೊಟ್ಟಿಲಿಗೆ ಮತ್ತು ಗಿಡಕ್ಕೆ ಮಹಿಳೆಯರು ತೆಂಗಿನಕಾಯಿ ಕಟ್ಟಿ, ತಮಗೆ ಸಂತಾನ ಭಾಗ್ಯ ಲಭಿಸಲಿ ಎಂದು ಬೇಡಿಕೊಳ್ಳುತ್ತಾರೆ. ಇದಲ್ಲದೆ ಬಸವಣ್ಣ ಗುಡಿಯ ಸುತ್ತಲು ಕಲ್ಲಿನ ಮನೆಗಳನ್ನು ನಿರ್ಮಾಣ ಮಾಡಿ, ಪೂಜೆ ಸಲ್ಲಿಸಿ, ಹೊಸ ಮನೆಗಾಗಿ ಬೇಡಿಕೊಳ್ಳುತ್ತಾರೆ.

ನಂದಿವೇರಿ ಮಠದ ಜಾತ್ರೆ: ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವರ್ಷವಿಡಿ ಪ್ರತಿವಾರದಲ್ಲಿ ಒಂದು ದಿನ ಕಪ್ಪತ್ತಗುಡ್ಡದ ಪರಿಸರದ ಕುರಿತು ಅರಿವು ಮೂಡಿಸುವ ವಿಚಾರ ಮತ್ತು ಕಾರ್ಯಾಗಾರ ಜರುಗುತ್ತಾ ಬಂದಿವೆ. ನಂದಿವೇರಿ ಜಾತ್ರೆ ಜತೆಗೆ ಪರಿಸರ ಕಾರ್ಯಕ್ರಮಗಳೂ ಜರುಗುತ್ತವೆ. ಹೀಗಾಗಿ ಇದು ಪರಿಸರ ಜಾತ್ರೆಯೂ ಹೌದು.

ಪರಿಸರ ಸಂರಕ್ಷಣೆ: ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಪರಿಸರ ಜಾಗೃತಿ ಮೂಡಿಸಿದರು. ಪ್ಲಾಸ್ಟಿಕ್‌ ಬಳಸದಂತೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಗಿಡಗಳನ್ನು ನೆಡುವ ಕುರಿತು ಅರಿವು ಮೂಡಿಸಿದರು. ಆರ್‌ಎಫ್‌ಒ ಮಂಜುನಾಥ ಮೆಗಲಮನಿ, ಸಿಪಿಐ ಮಂಜುನಾಥ ಕುಸುಗಲ್ಲ ನೇತೃತ್ವ ವಹಿಸಿದ್ದರು. ಪ್ಲಾಸ್ಟಿಕ್‌ ಮುಕ್ತ ಜಾತ್ರೆ ನಡೆಸಬೇಕು ಎನ್ನುವ ಇಲಾಖೆಯ ಪ್ರಯತ್ನಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು.

ಪ್ರತಿಯೊಬ್ಬರೂ ಶುದ್ಧ ಆಮ್ಲಜನಕ, ಉತ್ತಮ ಮಳೆ, ಮುಂದಿನ ಪೀಳಿಗೆಯ ಹಿತಕ್ಕಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿಸಬೇಕು ಎನ್ನುವ ಅರಣ್ಯ ಇಲಾಖೆ ಸಂಕಲ್ಪಕ್ಕೆ ಜನರು ಸಹಕಾರ ನೀಡಿದ್ದಾರೆ ಎಂದು ಕಪ್ಪತ್ತಗುಡ್ಡ ವಲಯದ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.